ಭಾವೈಕ್ಯತೆಯ ಸಂಗಮ ಹಜರತ ಹಾಜಿಮಸ್ತಾನ ಉರುಸ್

ತಿಕೋಟಾ:ಜು.18: ಇಡೀ ಜಗತ್ತಿಗೆ ಅನೇಕತೆಯಲ್ಲಿ ಏಕತೆಯನ್ನು ಎತ್ತಿ ತೋರಿಸಿದ ರಾಷ್ಟ್ರ ನಮ್ಮದು. ಹಿಂದೂ, ಮುಸ್ಲಿಂ, ಬೌದ್ಧ, ಜೈನ್, ಪಾರಸಿ ಹೀಗೆ ವಿವಿಧ ಧರ್ಮೀಯರು ಭಾವೈಕ್ಯತೆಯಿಂದ ನೆಲೆಸಿರುವ ಭರತ ಭೂಮಿ ನಮ್ಮದು. ವಿಜಯಪುರ ಜಿಲ್ಲಾ ಕೇಂದ್ರ ಸ್ಥಾನದಿಂದ 20 ಕಿ.ಮೀ. ಪಶ್ಚಿಮಕ್ಕೆ ಇರುವ ತಿಕೋಟಾ ಪಟ್ಟಣವಿದೆ. ಆಗಿನ ಮಹಾರಾಷ್ಟ್ರದ ಕುರುಂದವಾಡ ಸಂಸ್ಥಾನದಲ್ಲಿ ಕೇಂದ್ರ ಸ್ಥಾನವಾಗಿದ್ದ ಈ ಪಟ್ಟಣವು ಈಗ ತಾಲೂಕ ಕೇಂದ್ರವಾಗಿದೆ. 16 ನೇಯ ಶತಮಾನದಲ್ಲಿ ನಿರ್ಮಾಣಗೊಂಡ ಎರಡನೇಯ ತಾಜಮಹಲ್ ಎಂದೇ ಕರೆಯಲಾಗುವ ಇಬ್ರಾಹಿಂ ರೋಜಾ ವಾಸ್ತುಶಿಲ್ಪಿ ಸಂದಲ್ ಮಲೀಕನ ಸಮಾಧಿ ಈ ನಗರದಲ್ಲಿರುವದು ಒಂದು ವಿಶೇಷ. ದೇಶದಲ್ಲಿಯೇ ಮೊಟ್ಟಮೊದಲ ಸರ್ಕಸ್ ಕಂಪನಿ ಪ್ರಾರಂಭಿಸಿದ ಗಣಪತರಾವ್ ಛತ್ರೆ, ಖ್ಯಾತ್ ಪ್ರವಚನಕಾರ ದಾನಪ್ಪ ಜತ್ತಿ ಹಾಗೂ ಜಾನಪದ ಕಲೆಗಳಲ್ಲೊಂದಾದ ಚೌಡಕಿ ಪದ ಗಾಯಕಿ ಗೌರವ್ವ ಮಾದರ ಅವರು ಈ ತಿಕೋಟಾ ಪಟ್ಟಣದವರಾಗಿರುವುದು ಇನ್ನೊಂದು ವೈಶಿಷ್ಯವಾಗಿದೆ.

ಈ ಪಟ್ಟಣದಲ್ಲಿರುವ ಹಜರತ ಹಾಜಿಮಸ್ತಾನ ದರ್ಗಾ ರಾಜ್ಯದಲ್ಲಿರುವ ಭಾವೈಕ್ಯತೆ, ಸೌಹಾರ್ಧತೆ ಮತ್ತು ಸಾಮರಸ್ಯಕ್ಕೆ ಹೆಸರಾದ ಪವಿತ್ರ ಮತ್ತು ದೈವಿ ತಾಣವಾಗಿದೆ. ಇಲ್ಲಿ ಬ್ರಾಹ್ಮಣ, ಲಿಂಗಾಯತರು, ಮುಸ್ಸಿಮರು ಸೇರಿದಂತೆ ಎಲ್ಲ ಧರ್ಮೀಯರು ಭಾವ-ಭಕ್ತಿಯಿಂದ ಆರಾಧಿಸುವ ಸೂಫಿ-ಸಂತ ಹಜರತ ಹಾಜಿಮಸ್ತಾನ ದರ್ಗಾದ ಉರುಸ್ ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ಉರುಸ್‍ನಲ್ಲಿ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳ ಭಕ್ತರು ಆಗಮಿಸುತ್ತಾರೆ.

ಹಲವು ವಿಶೇಷತೆಗಳ ಹೆಸರುವಾಸಿಯಾದ ಈ ಪಟ್ಟಣವು ಭಾವೈಕ್ಯತೆ ಸಂದೇಶ ಸಾರುವ ಈ ದರ್ಗಾದ ಉರುಸ್ ಅಂಗವಾಗಿ ಯಾವುದೇ ಜಾತಿ, ಮತ-ಪಂಥ, ಜನಾಂಗ, ಧರ್ಮದವರೆಂಬ ಭೇದ-ಭಾವವಿಲ್ಲದೇ ಎಲ್ಲರೂ 20 ದಿನಗಳ ರೋಜಾ (ಹಗಲು ಉಪವಾಸ) ವ್ರತ ಮಾಡುತ್ತಾರೆ. ಈ ದರ್ಗಾ ಉರುಸ್ ಮೂರು ದಿನಗಳವರೆಗೆ ಜರುತ್ತದೆ. ದಿನಾಂಕ:20-07-2022 ರಂದು ಮೊದಲ ದಿನ ಊರಿನ ಬ್ರಾಹ್ಮಣ ಸಮಾಜದ ಶ್ರೀ ರಾಮರಾವ್ ದೇಸಾಯಿ ಇವರ ಮನೆಯಿಂದ ವಿಜೃಂಭಣೆಯಿಂದ ಸಂದಲ್ (ಗಂಧ) ಬರುವುದು. ದಿನಾಂಕ: 21-07-2022 ರಂದು ಪಟ್ಟಣದ ಪೋಲೀಸ್ ಪಾಟೀಲರ ಮನೆತನದವರಾದ ಡಾ. ಮಲ್ಲನಗೌಡ. ಮಾದಪ್ಪಗೌಡ. ಪಾಟೀಲ (ಚಿಕ್ಕ ಮಕ್ಕಳ ತಜ್ಞರು, ಬಿ.ಎಲ್.ಡಿ.ಇ ಆಸ್ಪತ್ರೆ) ಇವರ ಮನೆಯಿಂದ ನೈವೇದ್ಯದೊಂದಿಗೆ ಗಲೀಫ್ (ವಸ್ತ್ರ) ಬರುವುದು.

ಸುಮಾರು 200 ರಿಂದ 250 ವರ್ಷಗಳ ಹಿಂದೆ ತಿಕೋಟಾಕ್ಕೆ ಬಂದು ಇಸ್ಲಾಂ ಧರ್ಮದ ಪ್ರೀತಿಯ ಜೊತೆಗೆ ಪರಧರ್ಮಗಳನ್ನು ಗೌರವದಿಂದ ಕಾಣುತ್ತಾ ತಮ್ಮ ಸಾಧನೆಯ ಬಲದಿಂದ ಸಿದ್ಧಿ ಪುರುಷನಾಗಿದ್ದ ಸೂಫಿ-ಸಂತ ಹಜರತ ಹಾಜಿಮಸ್ತಾನ ಅವರು ‘ವಸುದೈವ ಕುಟುಂಬಕಂ’ ಎಂಬ ವಿಶಾಲತೆ ಧರ್ಮ ಸಹಿಂಷ್ಣುತೆಯಿಂದ ಸರ್ವ ಜನಾಂಗದ ಕಲ್ಯಾಣಕ್ಕಾಗಿ ತಪಸ್ಸು ಮಾಡಿದ ಶ್ರೇಷ್ಠ ಸಂತನಾಗಿದ್ದನೆಂಬ ಪ್ರತೀತಿಯಿದೆ.

ಆಗಿನ ಕಾಲದಲ್ಲಿ ವ್ಯಾಪಾರಿಗಳಾಗಿದ್ದ ಲಿಂಗಾಯತ ಸಮಾಜದ ಪೀರಶೆಟ್ಟಿ ಮನೆತನದÀವರು ಹಾಜಿಮಸ್ತಾನ ದರ್ಗಾ ಕಟ್ಟಿಸಿದ್ದಾರೆ. ಹೀಗಾಗಿ ಉರುಸ್‍ನ ಮೊದಲ ದಿನದ ಗಂಧ ಅರ್ಪಿಸುವ ಗೌರವ ಅವರ ಮನೆತನಕ್ಕಿದೆ. ಈ ದರ್ಗಾದ ಸಮೀಪವೇ ನೂರಜಿಸಾಬ ಬಡಕಲ್ ಎಂಬ ಹೆಸರಿನ ಶಿಷ್ಯನಾಗಿದ್ದ ಬಡಕಲ್ ಸಾಹೇಬ ಎಂಬ ಇನ್ನೊಂದು ದರ್ಗಾ ಇದೆ. ಈ ಬಡಕಲ್ ಸಾಹೇಬ ದರ್ಗಾದ ಮೇಲ್ಛಾವಣೆಯನ್ನು ಕಟ್ಟಬೇಕೆಂದರೆ ಸುತ್ತಲಿನ ಏಳು ನದಿಗಳ ನೀರು ತಂದು ಒಂದೇ ದಿನದಲ್ಲಿ ಕಟ್ಟಬೇಕೆಂಬ ಇತಿಹಾಸವಿದೆ. ಈ ಕಾರ್ಯವು ಇನ್ನೂ ಕೈಗೂಡಿಲ್ಲವೆನ್ನುವುದು ಈ ಪಟ್ಟಣದ ಜನರ ಅಭಿಪ್ರಾಯವಾಗಿದೆ,

ಸರ್ವ ಧರ್ಮಿಯರ ಪವಿತ್ರ ತಾಣವಾದ ಈ ದರ್ಗಾಕ್ಕೆ ಗುರುವಾರ ಮತ್ತು ಅಮವಾಸ್ಯೆಯ ದಿನದಂದು ಜನರು ಭಕ್ತಿಯಿಂದ ನಡೆದುಕೊಳ್ಳುತ್ತಾರೆ ಮತ್ತು ಆರಾಧಿಸುತ್ತಾರೆ. ಈ ಮೂರು ದಿನಗಳವರೆಗೆ ನಡೆಯುವ ಈ ಉರುಸ್‍ನಲ್ಲಿ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಹಿಂದೂ, ಮುಸಿಂ, ಸೇರಿದಂತೆ ಎಲ್ಲ ಧರ್ಮದ ಲಕ್ಷಾಂತರ ಜನರ ಭಕ್ತಸಾಗರ ಸೇರುತ್ತದೆ. ಈ ವರ್ಷದ ಉರುಸ್ ಅಂಗವಾಗಿ ಆಟ, ನಾಟಕ, ಜೋಡು ಎತ್ತಿನ ರೇಸ್, ಕುದುರೆ ಗಾಡಿ ರೇಸ್, ಟ್ರ್ಯಾಕ್ಟರ್ ಇಂಜೀನ್ ಜಗ್ಗುವ ರೇಸ್, ಜಂಗಿ ಕುಸ್ತಿಗಳು ಹೀಗೆ ಇನ್ನಿತರ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.