ಭಾವೈಕ್ಯತೆಯ ಮೊಹರಂ ಹಬ್ಬ ಆಚರಣೆ


ಲಕ್ಷ್ಮೇಶ್ವರ,ಜು.30: ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಕೊಂಡಿಯಾಗಿರುವ ಮೊಹರಂ ಹಬ್ಬಕ್ಕೆ ಹೆಜ್ಜೆ ಮೇಳದ ತಾಳಕ್ಕೆ ತಕ್ಕಂತೆ ಆಲಾಯಿ ಪದಗಳ ಇಂಪುಗಳೊಂದಿಗೆ ಸಂಭ್ರಮ ಮತ್ತು ಸಡಗರದಿಂದ ಪಾಂಜಾಗಳ ಮೆರವಣಿಗೆ ಮಾಡುತ್ತ ಮೊಹರಂ ಹಬ್ಬದ ಕೊನೆಯ ದಿನದ ದೃಶ್ಯ ಕಣ್ತುಂಬಿಕೊಳ್ಳಲು ಸಾವಿರಾರು ಜನರು ಪಟ್ಟಣದ ಬಜಾರ್ ಸಾಲಿನಲ್ಲಿ ನೆರೆದಿದ್ದರು.
ಪಟ್ಟಣದ ವಿವಿಧ ಓಣಿಗಳಲ್ಲಿ ಪ್ರತಿಷ್ಠಾಪನೆಗೊಂಡಿರುವ ಆಲಾಯಿ ದೇವರುಗಳು ಪಟ್ಟಣದ ದೂದಪೀರಾ ದರ್ಗಾಕ್ಕೆ ಬೇಟಿ ನೀಡಿ ಅಲ್ಲಿಂದ ಮೆರವಣೆಗೆಯ ಮೂಲಕ ಪಟ್ಟಣದ ಹಾವಳಿ ಹನಮಪ್ಪನ ದೇವಸ್ಥಾನದ ಹತ್ತಿರ ಬಂದು ಜಮಾವಣೆಗೊಂಡು ಎಲ್ಲ ಪಾಂಜಾಗಳ ಮೆರವಣಿಗೆಯು ಬಜಾರ್ ಮಾರ್ಗವಾಗಿ ಸಾಗಿ ಸರ್ಕಾರಿ ಆಸ್ಪತ್ರೆಯವರೆಗೆ ಸಾಗಿ ಬಂದು ನಂತರ ಅಲ್ಲಿಂದ ಮರಳಿ ತಮ್ಮ ತಮ್ಮ ಮಸೀದಿಗಳಿಗೆ ತೆರಳಿದವು.
ಡೋಲಿಗಳಲ್ಲಿ ಪಾಂಜಾಗಳನ್ನು ಹೊತ್ತು ಸಾಗುತ್ತಿರುವ ದೃಶ್ಯ ಮೊಹರಂ ಹಬ್ಬದ ಸಡಗರವನ್ನು ಹೆಚ್ಚಿಸಿರುವುದು ಕಂಡು ಬಂದಿತು. ಹಿಂದೂ-ಮುಸ್ಲಿಂ ಭಕ್ತರು ಪಾಂಜಾಗಳ ಮುಂದೆ ಕೈಮುಗಿದು ದೇವರಲ್ಲಿ ಬೇಡಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.