ಭಾವೈಕ್ಯತೆಯ ಮೊಹರಂಗೆ ಭಕ್ತಿಭಾವದ ತೆರೆ


ಸಂಜೆವಾಣಿ ವಾರ್ತೆ
ಹೊಸಪೇಟೆ ಜು30: ಹಿಂದೂ-ಮುಸ್ಲಿಂ ಬಾಂಧವರ ಭಾವೈಕ್ಯತೆಯ ಪ್ರತೀಕ ಮೊಹರಂ ಹಬ್ಬವನ್ನು ಹಿಂದೂ-ಮುಸ್ಲಿಂ ಬಾಂಧವರು ಜಿಲ್ಲಾದ್ಯಾಂತ ಸಂಭ್ರಮ ಸಡಗರದಿಂದ ಆಚರಿಸಿದರು. ಮೊಹರಂ ದೇವರು(ಪೀರಲದೇವರು)ಗಳನ್ನು ಕರ್ಬಲ್‍ಗೆ ಕಳುಹಿಸಿಕೊಡುವ ಮೂಲಕ ಶನಿವಾರ ಮೊಹರಂ ಹಬ್ಬಕ್ಕೆ ಸಂಭ್ರಮದ ತೆರೆ ಬಿದ್ದಿತು.
ಕಲ್ಯಾಣ ಕರ್ನಾಟಕದಲ್ಲಿ ಮೊಹರಂ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ವಿಜಯನಗರ ಜಿಲ್ಲೆಯಲ್ಲಿ ಈ ಹಬ್ಬವನ್ನು 11 ದಿನ ಆಚರಣೆ ಮಾಡುವ ರೂಢಿ ಇದೆ. ಹೊಸಪೇಟೆ ನಗರದ ಚಿತ್ತವಾಡ್ಗಿಯಲ್ಲಿ ಈ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಕಳೆದ ನೂರು ವರ್ಷಗಳಿಂದ ಮೊಹರಂ ಹಬ್ಬವನ್ನು ಆಚರಣೆ ಮಾಡುತ್ತ ಬಂದಿದ್ದು, ಕಳೆದ 11 ದಿನಗಳಿಂದ ನಗರದ ಶ್ರೀರಾಮಮಲಿ ಮಸೀದಿಯಲ್ಲಿ ಪ್ರತಿಷ್ಠಾಪನೆ ಮಾಡಿದ ರಾಮಲಿ ಸ್ವಾಮಿ ಹಾಗೂ ಚಿತ್ತವಾಡ್ಗಿಯ ಅಗಸರ ಓಣಿಯ ಸಣ್ಣ ರಾಮಾಲಿ ಸ್ವಾಮಿ ಮಸೀದಿಯ ಮೊಹರಂ ದೇವರು ಹಾಗೂ ದೊಡ್ಡ ಮಸೀದಿಯ ದೇವರು, ಕಮಲಾಪುರದ ಸಂಡೂರುಸ್ವಾಮಿ, ಮುಸ್ತಫಾ, ಮುದುಗಲ್ ಮಸೀದ್, ಕೆರೆತಾಂಡಾ ಸೇರಿದಂತೆ  ಕಡೆ ವಿವಿಧ ಪ್ರತಿಷ್ಠಾಪಿತವಾಗಿದ್ದ 200ಕ್ಕೂ ಹೆಚ್ಚು ಪೀರಲ ದೇವರಿಗೆ ಭಕ್ತರು ಪೂಜೆ ಸಲ್ಲಿಸಿ, ಹರಿಕೆ ತೀರಿಸಿದರು. ಶನಿವಾರ ಬಹುತೇಕ ಪೀರಲ ದೇವರವನ್ನು ವಿಸರ್ಜನೆ ಗೈದು, ಭಕ್ತಿಯಿಂದ ನಡೆಸಿ ವಿದಾಯ ಹೇಳಿದರು.