ಭಾವೈಕ್ಯತೆಯಲ್ಲಿ ಮೊಹರಂ ಆಚರಿಸಿ – ಪಿಎಸ್ಐ ಧನುಂಜಯ


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಆ. 6 :- ಧರ್ಮಾತೀತವಾಗಿ ಭಾವೈಕ್ಯತೆ ಸಾರುವಂತೆ ಮೊಹರಂ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವಂತೆ ಕೂಡ್ಲಿಗಿ ಪಿಎಸ್ಐ ಧನುಂಜಯ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಅವರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ ಶಾಂತಿಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಕೂಡ್ಲಿಗಿ ಪಟ್ಟಣದಲ್ಲಿ ಯಾವುದೇ ಗಲಾಟೆ ಗದ್ದಲವಿಲ್ಲದೆ ಪ್ರತಿ ವರ್ಷವೂ ಹಿಂದೂ ಮುಸ್ಲಿಂ ಭಾಂಧವರು  ಭಾವೈಕ್ಯ ಸಾರುವ ರೀತಿಯಲ್ಲಿ ಹಬ್ಬದ ಆಚರಣೆಯಲ್ಲಿ ತೊಡಗಿ ಶಾಂತರೀತಿಯಲ್ಲಿ ಈ ಹಿಂದೆ ಆಚರಣೆ ಮಾಡಿಕೊಂಡು ಹೋಗಿರುವಂತೆ ಆಚರಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ ಯಾರಾದರೂ ಕಿಡಿಗೇಡಿಗಳು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದಲ್ಲಿ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಸೋಮವಾರ ಕತ್ತಲರಾತ್ರಿ ದಿನ ಮತ್ತು ಮಂಗಳವಾರ ಮೊಹರಂ ಕೊನೆ ದಿನ ಹೆಚ್ಚಿನ ಬಂದೋಬಸ್ತ್ ಒದಗಿಸಲಾಗುವುದು ಎಂದರು.
ದೇವರ ಕಾರ್ಯ ಮಾಡುವ ಸಂಪ್ರದಾಯದ ನಿಯಮವನ್ನು ಆ ದೇವಸ್ಥಾನದ ಅರ್ಚಕರು ವಿವರಿಸಿದರು ಅಂದೇ ಊರಮ್ಮ ದೇವಿಯ ಹೊಳೆಗೆ ಕರೆದೊಯ್ಯುವ ಕಾರ್ಯಕ್ರಮ ಇರುವುದರಿಂದ ಅಂದಿನ ಮೊಹರಂ ಕೊನೆ ದಿನದ ಕಾರ್ಯಕ್ರಮ ಬೇಗ ಮುಗಿಸುವಂತೆ ಅನುವು ಮಾಡಬೇಕೆಂದು ಪಟ್ಟಣದ ದುರುಗಪ್ಪ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದರು. ಅದಕ್ಕೆ ಸಮ್ಮತಿಸಿದ ಪೊಲೀಸ್ ಅಧಿಕಾರಿಗಳು ಪಟ್ಟಣದಲ್ಲಿ ಇತ್ತೀಚಿಗೆ ಜರುಗಿದ ಶ್ರೀ  ಗುಳೆಲಕ್ಕಮ್ಮದೇವಿ  ಜಾತ್ರೆಗೆ ನೀಡಿದ ಸೂಕ್ತ ಬಂದೋಬಸ್ತಿನಂತೆ ಈ ಹಬ್ಬಕ್ಕೂ ನೀಡಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಾಗಲು ನಿಮ್ಮಗಳ ಸಹಕಾರ ಬಹುಮುಖ್ಯವಾಗಿದೆ ಎಂದು ಪಿಎಸ್ಐ ಧನುಂಜಯ ತಿಳಿಸಿದರು.
ಶಾಂತಿ ಸಭೆಯಲ್ಲಿ ಪಟ್ಟಣ ಪಂಚಾಯತಿ ಸದಸ್ಯ ಕಾವಲ್ಲಿ ಶಿವಪ್ಪನಾಯಕ, ಶುಕೂರ್, ಗುಪ್ಪಾಲ್ ಕಾರೆಪ್ಪ, ಬಾಣದ ಶಿವಶಂಕರ, ದುರುಗೇಶ, ಪೀರಲ ದೇವರ ಅರ್ಚಕರು, ದುರುಗಪ್ಪ ಹಾಗೂ ಇತರರು ಉಪಸ್ಥಿತರಿದ್ದರು.

Attachments area