ಭಾವೈಕ್ಯತೆಗಾಗಿ ರಾಜಿ,ಸಂಧಾನಕ್ಕೆ ಕರೆ

ಕೋಲಾರ,ಸೆ,೧೪- ರಾಜಿ-ಸಂಧಾನವು ವ್ಯಾಜ್ಯಗಳನ್ನು ನಿವಾರಿಸುವುದು ಮಾತ್ರವಲ್ಲದೇ ಭ್ರಾತೃತ್ವ, ವಿಶ್ವಾಸ, ಸಾಮರಸ್ಯತೆ, ಭಾವೈಕ್ಯತೆಯನ್ನು ಮೂಡಿಸುವುದರಿಂದ ರಾಜಿ-ಸಂಧಾನಕ್ಕೆ ಮುಂದಾಗಿ ಎಂದು ಕೋಲಾರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಶುಕ್ಲಾಕ್ಷ ಪಾಲನ್ ಕರೆ ನೀಡಿದರು.
ಜಿಲ್ಲಾ ನ್ಯಾಯಾಲಯ ಪ್ರಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಏರ್ಪಡಿಸಿದ್ದ ರಾಷ್ಟ್ರೀಯ ಲೋಕ ಅದಾಲತ್ ಬೈಠಕ್‌ಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.ಇವುಗಳಲ್ಲಿ ೬೨ ಕ್ರಿಮಿನಲ್ ಪ್ರಕರಣಗಳು, ೩೧೨ ಚೆಕ್ ಬೌನ್ಸ್ ಪ್ರಕರಣಗಳು, ೨೩ ಕೌಟುಂಭಿಕ ವ್ಯಾಜ್ಯಗಳು, ೭೩ ಆಸ್ತಿ ವಿಭಾಗ ದಾವೆಗಳು, ೨೭೪ ಇತರೆ ಸಿವಿಲ್ ಪ್ರಕರಣಗಳು, ೩೧ ಮೋಟಾರು ವಾಹನ ಅಪಘಾತ ಪ್ರಕರಣಗಳು, ೪೯೫೦ ಇತರೆ ಕ್ರಿಮಿನಲ್ ಪ್ರಕರಣಗಳು ಸೇರಿ ಒಟ್ಟು ೬೬೧೯ ಪ್ರಕರಣಗಳು ಈ ಬಾರಿಯ ರಾಷ್ಟ್ರೀಯ ಅದಾಲತ್‌ನಲ್ಲಿ ಇತ್ಯರ್ಥವಾಗಿವೆ. ಈ ಪ್ರಕರಣಗಳಲ್ಲಿ ಪರಿಹಾರವೇ ರೂ.೨೧,೮೬,೧೧,೬೬೬/- ಆಗಿರುತ್ತದೆ. ಇಂಥಾ ಬಾರೀ ಯಶಸ್ಸಿಗೆ ಕಕ್ಷಿದಾರರು ಮಾತ್ರವಲ್ಲದೇ ಪಾಲ್ಗೊಂಡ ಎಲ್ಲಾ ವಕೀಲರ ಪರಿಶ್ರಮವೇ ಕಾರಣವಾಗಿದೆ ಎಂದು ಹೇಳಿದರು.
ಪ್ರತಿ ಕೇಸ್‌ನ್ನು ನಡೆಸುವ ಪ್ರತಿ ವಕೀಲರಿಗೂ ತಾನು ಕೇಸು ಗೆಲ್ಲಬೇಕು ಎಂಬ ಗುರಿ ಖಂಡಿತಾ ಇರುತ್ತದೆ. ಇದಕ್ಕಾಗಿ ಅವರು ದಿನಗಟ್ಟಳೆ ಕಷ್ಟ ಪಟ್ಟು ತಮ್ಮ ಕೇಸಿನ ಗೆಲುವಿಗೆ ಪ್ರಯತ್ನಪಡುತ್ತಿರುತ್ತಾರೆ. ಇಂಥಾ ಸಂದರ್ಭದಲ್ಲಿ ತಮ್ಮ ಗೆಲುವಿನ ಬಗ್ಗೆ ಯೋಚಿಸದೇ, ತಮ್ಮ ಫೀಸಿಗೂ ಆಸೆ ಪಡದೇ, ಕಕ್ಷಿದಾರರ ಒಳಿತಿಗಾಗಿ ರಾಜಿ-ಸಂಧಾನಕ್ಕಾಗಿ ಪ್ರಯತ್ನಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ವಕೀಲರನ್ನು ತುಂಬು ಮನಸ್ಸಿನಿಂದ ಪ್ರಶಂಶಿಸಿದರು.ರಾಜಿ-ಸಂಧಾನವು ವೃಥಾ ಕೇಸು ನಡೆಸುವುದಕ್ಕೆ ತಿಂಗಳುಗಟ್ಟಳೆ ಕೋರ್ಟಿಗೆ ಬರುವುದನ್ನು ತಪ್ಪಿಸಿ ಒಂದೆರೆಡು ಬೈಠಕ್‌ಗಳಲ್ಲಿಯೇ ವ್ಯಾಜ್ಯನಿವಾರಿಸುತ್ತದೆ. ಸಮಯ, ಶಕ್ತಿ, ಹಣ ಉಳಿತಾಯವಾಗುವುದಲ್ಲದೇ ವ್ಯಾಜ್ಯಕಟ್ಟಿಕೊಂಡವರ ಜೊತೆ ನಿಮ್ಮ ಸ್ನೇಹ-ಸಂಬಂಧ ಅಭಿವೃದ್ಧಿಯಾಗುತ್ತದೆ. ಭ್ರಾತೃತ್ವ, ವಿಶ್ವಾಸ, ಸಾಮರಸ್ಯತೆ, ಭಾವೈಕ್ಯತೆಯ ಮೂಡುತ್ತದೆ. ಇದೇ ವಿಶ್ವಶಾಂತಿಗೆ ನಾಂದಿ ಎಂದರು.
ಎಲ್ಲಾ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಸುನಿಲ ಎಸ್ ಹೊಸಮನಿ, ವಕೀಲರ ಸಂಘದ ಅಧ್ಯಕ್ಷ ಮುನೇಗೌಡ, ಕಾರ್ಯದರ್ಶಿ ಭೈರಾರೆಡ್ಡಿ, ವಕೀಲ ಕೆ.ನರೇಂದ್ರಬಾಬು ಹಾಜರಿದ್ದರು.