ಭಾವಸಾರ ಕ್ಷತ್ರಿಯರ ಬೇಡಿಕೆ ಈಡೇರಿಕೆಗಾಗಿ ಸಿಎಂ ಬಳಿಗೆ ನಿಯೋಗ

ತುಮಕೂರು, ಜು. ೨೦- ರಾಜಕೀಯವಾಗಿ ಯಾವುದೇ ಪ್ರಾತಿನಿಧ್ಯ ಇಲ್ಲದೆ ಮತ್ತು ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಾಕಷ್ಟು ಹಿಂದುಳಿದಿರುವ ಭಾವಸಾರ ಕ್ಷತ್ರಿಯ ಸಮಾಜದ ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡಲು ಮುಖ್ಯಮಂತ್ರಿ ಬಳಿ ನಮ್ಮ ಮುಖಂಡರ ನಿಯೋಗ ತೆರಳುವುದಾಗಿ ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾದ ರಾಜ್ಯ ಘಟಕದ ಹೈಪವರ್ ಕಮಿಟಿ ಛೇರ್ಮನ್ ರಮೇಶ್ ತಾಪ್ಸೆ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ದೇಶದಲ್ಲಿ ೧.೫೦ ಕೋಟಿ ಹಾಗೂ ಕರ್ನಾಟಕದಲ್ಲಿ ಸುಮಾರು ೨೫ ಲಕ್ಷ ಜನಸಂಖ್ಯೆ ಹೊಂದಿರುವ ನಮಗೆ ರಾಜಕೀಯವಾಗಿ ಯಾವುದೇ ಪ್ರಾತಿನಿತ್ಯ ದೊರೆತಿಲ್ಲ. ನಮ್ಮ ಜನಾಂಗದ ಸಂಸದರು, ಶಾಸಕರು, ಎಂಎಲ್‌ಸಿಗಳು ಇಲ್ಲ. ಎಲ್ಲ ರಾಜಕೀಯ ಪಕ್ಷಗಳು ಮತ್ತು ಸರ್ಕಾರಗಳು ನಮ್ಮ ಜನಾಂಗವನ್ನು ಕಡೆಗಣಿಸಿದ್ದು, ಕೇವಲ ಓಟು ಹಾಕಲು ಬಳಸಿಕೊಳ್ಳುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ಸಮಾಜದ ಹಿಂದಿನ ಅಧ್ಯಕ್ಷರು ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತಂದಿಲ್ಲ ಹಾಗೂ ಜನಾಂಗವನ್ನು ಸಂಘಟಿಸುವ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ೫ ವರ್ಷಗಳಿಗೊಮ್ಮೆ ನಮ್ಮ ಸಂಘಕ್ಕೆ ಚುನಾವಣೆ ನಡೆಯುತ್ತಿದ್ದು, ಈ ಬಾರಿ ಆಯ್ಕೆಯಾಗಿರುವ ನೂತನ ಪದಾಧಿಕಾರಿಗಳು ರಾಜ್ಯಾದ್ಯಂತ ಪ್ರವಾಸ ಮಾಡಿ, ನಮ್ಮ ಜನಾಂಗವನ್ನು ಸಂಘಟಿಸಲು ಮುಂದಾಗಿರುವುದಾಗಿ ತಿಳಿಸಿದರು.
ಜನಾಂಗದ ಯಾವುದೇ ವ್ಯಕ್ತಿ ಐಎಎಸ್, ಐಪಿಎಸ್ ಸೇರಿದಂತೆ ಇತರೆ ಯಾವುದೇ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿಲ್ಲ. ಕೆಲವೇ ಮಂದಿ ನಮ್ಮಲ್ಲಿ ಶ್ರೀಮಂತರಿದ್ದು, ಉಳಿದವರು ಬಡತನದಲ್ಲಿ ಟೈಲರ್ ವೃತ್ತಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಶೈಕ್ಷಣಿಕವಾಗಿ, ಆರ್ಥಿಕವಾಗಿ ತೀರ ಹಿಂದುಳಿದಿದ್ದೇವೆ ಎಂದರು.
ಆಗಸ್ಟ್ ೬ ರಂದು ಬೆಂಗಳೂರಿನ ಡಾ. ಅಂಬೇಡ್ಕರ್ ಭವನದಲ್ಲಿ ನಮ್ಮ ಸಮುದಾಯದ ಅಖಿಲ ಭಾರತ ಮಟ್ಟದ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು, ಸುಮಾರು ೫ ಸಾವಿರ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕರ್ನಾಟಕದಿಂದ ೮೦೦ ಪ್ರತಿನಿಧಿಗಳು ಭಾಗಿಯಾಗುತ್ತಿದ್ದು, ಈ ಕಾರ್ಯಕ್ರಮದ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸುತ್ತಿರುವುದಾಗಿ ತಿಳಿಸಿದರು.
ಭಾವಸಾರ ಕ್ಷತ್ರಿಯ ಅಭಿವೃದ್ಧಿ ನಿಗಮ ಸ್ಥಾಪನೆ ಅಗತ್ಯ ಅನುದಾನ ನೀಡಿಕೆ, ಬೆಂಗಳೂರು – ತುಮಕೂರು ಮಧ್ಯೆ ೨೫ ಎಕರೆ ಜಾಗವನ್ನು ಸರ್ಕಾರ ನೀಡಿ ಅಲ್ಲಿ ಸಂಘದ ಕಟ್ಟಡ ನಿರ್ಮಾಣ, ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ವಿದ್ಯಾರ್ಥಿನಿಲಯ ನಿರ್ಮಾಣ ಹೀಗೆ ಅಗತ್ಯ ಸೌಲಭ್ಯಗಳನ್ನು ಮಾಡಿಕೊಡುವಂತೆ ಮುಖ್ಯಮಂತ್ರಿ ಬಳಿ ನಿಯೋಗ ತೆರಳಿ ಮನವಿ ಮಾಡುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಘಟಕದ ಅಧ್ಯಕ್ಷ ಶ್ರೀನಿವಾಸ ರಾವ್ ಪಿಸ್ಸೆ, ಉಪಾಧ್ಯಕ್ಷರಾದ ಗುರು ಪ್ರಸಾದ್ ಪಿಸ್ಸೆ, ಸತ್ಯನಾರಾಯಣ ಅಂಬರ್‍ಕರ್, ಜಿಲ್ಲಾ ಘಟಕದ ಅಧ್ಯಕ್ಷ ಪವನ್‌ಕುಮಾರ್ ಪಿಸ್ಸೆ, ಯುವ ಘಟಕದ ಉಪಾಧ್ಯಕ್ಷ ನಾಗೇಶ್‌ತೇಲ್ಕರ್, ಮುಖಂಡರಾದ ಪ್ರಭಾಕರ ಬಂಡಾಳೆ, ಕಿರಣರ್‌ಕಾಕಡೆ, ದಿನೇಶ್ ಬಾಬು, ಮಹದೇವ್ ರಾವ್ ವರ್ಣೆ ಮತ್ತಿತರರು ಉಪಸ್ಥಿತರಿದ್ದರು.