ಭಾವನಾತ್ಮಕ ವಿಚಾರಗಳ ಮೂಲಕ ಜನರ ದಾರಿತಪ್ಪಿಸುವ ಕೆಲಸ

ಕೇಂದ್ರ-ರಾಜ್ಯ ಸರಕಾರದ ಜನವಿರೋಧಿ ಮಸೂದೆಗಳ ವಿರುದ್ದ ಪ್ರತಿಭಟನೆ

ಸುಳ್ಯ,ನ.೧೯- ದೇಶದ ಜನರನ್ನು ಭಾವನಾತ್ಮಕ ವಿಚಾರಗಳ ಮೂಲಕ ದಾರಿ ತಪ್ಪಿಸಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತ, ದಲಿತ, ಕಾರ್ಮಿಕ ಹಾಗೂ ಜನವಿರೋಧಿ ಮಸೂದೆಗಳನ್ನು ಜಾರಿಗೆ ತರುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಸರಕಾರಗಳು ಹಗಲು ದರೋಡೆ ನಡೆಸುತ್ತಿದ್ದಾರೆ ಎಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ರವಿಕಿರಣ ಪುಣಚ ಹೇಳಿದರು.
ಅವರು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ, ರೈತ ದಲಿತ ಕಾರ್ಮಿಕ ಜನಪರ ಚಳುವಳಿಗಳ ಒಕ್ಕೂಟದ ಆಶ್ರಯದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನವಿರೋಧಿ ಮಸೂದೆಗಳನ್ನು ಹಿಂಪಡೆಯಲು ಆಗ್ರಹಿಸಿ ಸಂಪಾಜೆಯ ಕಲ್ಲುಗುಂಡಿಯಿಂದ ಆರಂಭವಾದ ವಾಹನ ಜಾಥ ಹಾಗೂ ಸುಳ್ಯದಲ್ಲಿ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕೇಂದ್ರ ಸರಕಾರ ಜನವಿರೋಧಿ ಮಸೂದೆಗಳನ್ನು ಜಾರಿಗೆ ತರುವ ಮೂಲಕ ರೈತರನ್ನು ಸಾವಿನ ಕೂಪಕ್ಕೆ ತಳ್ಳುತ್ತಿದೆ. ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಎಂದು ಅಧಿಕಾರಕ್ಕೆ ಬಂದ ಕೇಂದ್ರ ಸರಕಾರ ದೇಶದ ಜಿಡಿಪಿ ಶೇ. ೦.೨೯ ಕ್ಕೆ ತಲಿಪಿದೆ. ಅಧಿಕಾರಕ್ಕೆ ಬಂದರೆ ಎಂ.ಎಸ್.ಸ್ವಾಮೀನಾಥನ್ ವರದಿ ಜಾರಿ ಮಾಡುತ್ತೇವೆ ಎಂದು ಹೇಳಿದವರು ವರದಿ ಅನುಷ್ಠಾನಕ್ಕೆ ಮನಸ್ಸು ಮಾಡುತ್ತಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದು ೭೦ ವರ್ಷ ಕಳೆದರೂ ದೇಶದ ಖಜಾನೆ ಲೂಟಿ ಆಗಿಲ್ಲ. ಆದರೆ ಕಳೆದ ೬ ವರ್ಷಗಳಲ್ಲಿ ಆಡಳಿತದ ನಡೆಸಿದ ಸರಕಾರ ಖಜಾನೆ ಲೂಟಿ ಮಾಡಿದಲ್ಲದೇ ೧೦೦ ಲಕ್ಷ ಕೋಟಿ ಸಾಲವನ್ನು ಮಾಡಿದೆ ಎಂದು ಹೇಳಿದರು.
ಬಹಿರಂಗ ಸಭೆಯ ಅಧ್ಯಕ್ಷತೆಯನ್ನು ಲೋಲಜಾಕ್ಷ ಭೂತಕಲ್ಲು ವಹಿಸಿದ್ದರು. ಪ್ರಾಂತ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಸಾಲಿಯಾನ್, ರೈತ ಸಂಘದ ಜಿಲ್ಲಾಧ್ಯಕ್ಷ ಬಾಸ್ಟಾಲ್ಟ್ ಪ್ರಕಾಶ್ ಫೆರ್ನಾಂಡಿಸ್, ಸಿ.ಐ.ಟಿ.ಯು.ಸಿ. ತಾಲೂಕು ಅಧ್ಯಕ್ಷ ಕೆ.ಪಿ.ಜಾನಿ, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ವಿನೋದ್ ಪಾದೆಕಲ್ಲು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಶ್ವರ ಭಟ್ ಬಡಿಲ ಮಾತನಾಡಿದರು. ಜಿಲ್ಲಾ ಉಪಾದ್ಯಕ್ಷ ದಿವಾಕರ ಪೈ, ತಾಲೂಕು ಸಮಿತಿಯ ಪದ್ಮನಾಭ ಗೌಡ ನೂಜಾಲು ವೇದಿಕೆಯಲ್ಲಿದ್ದರು.
ಸಭೆಯಲ್ಲಿ ಮುಖಂಡರಾದ ಎಂ. ವೆಂಕಪ್ಪ ಗೌಡ, ಟಿ.ಎಂ.ಶಹೀದ್, ಎನ್.ಜಯಪ್ರಕಾಶ್ ರೈ, ಸೋಮಶೇಖರ್ ಕೊಯಿಂಗಾಜೆ, ಆನಂದ ಬೆಳ್ಳಾರೆ, ಸುರೇಶ್ ಅಮೈ, ನಂದರಾಜ್ ಸಂಕೇಶ, ಸತ್ಯಕುಮಾರ್ ಆಡಿಂಜ, ಕೆ.ಪಿ.ರಾಬರ್ಟ್ ಡಿಸೋಜ, ಆಶೋಕ್ ಎಡಮಲೆ, ದಿನೇಶ್ ಮಡಪ್ಪಾಡಿ, ಶಶಿಧರ್ ಎಂ.ಜೆ ಮೊದಲಾದವರು ಉಪಸ್ಥಿತರಿದ್ದರು.
ಜಾಥಾಕ್ಕೆ ಚಾಲನೆ
ಸರಕಾರಗಳ ಜನವಿರೋಧಿ ಮಸೂದೆಗಳನ್ನು ಹಿಂಪಡೆಯಲು ಆಗ್ರಹಿಸಿ, ಭಾರತೀಯ ಕೃಷಿ ಪರಂಪರೆಯನ್ನು ಹಾಗೂ ಸಂಪತನ್ನು ಉಳಿಸುವ ಸಲುವಾಗಿ ಜಿಲ್ಲಾಯಾದ್ಯಂತ ನಡೆಯುವ ವಾಹನ ಜಾಥ ಹಾಗೂ ಬಹಿರಂಗ ಸಭೆಗೆ ಕಲ್ಲುಗುಂಡಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ ಚಾಲನೆ ನೀಡಿದರು. ಪ್ರತಿಭಟನಾ ವಾಹನ ಜಾಥಾ ನ. ೨೩ ರವರೆಗೆ ಜಿಲ್ಲೆಯ ತಾಲೂಕುಗಳಲ್ಲಿ ಸಂಚಾರಿಸಲಿದೆ. ನ.೨೩ ರಂದು ಮಂಗಳೂರಿನ ಪುಭವನದಲ್ಲಿ ಸಮಾರೋಪ ನಡೆಯಲಿದೆ.