ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾದ ಬೀಳ್ಕೊಡುಗೆ ಸಮಾರಂಭ

ಅಫಜಲಪುರ:ಆ.4: ತಾಲೂಕಿನಲ್ಲಿ ಕಳೆದ ಒಂದು ವರ್ಷದಿಂದ ಶಿಕ್ಷಕರ ನೆಚ್ಚಿನ ಅಧಿಕಾರಿಯಾಗಿ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಹುಜರಾತಿ ಅವರು ಚಿತ್ತಾಪುರ ತಾಲೂಕಿಗೆ ವರ್ಗಾವಣೆಗೊಂಡ ಹಿನ್ನೆಲೆ ಶಿಕ್ಷಕರು ತಮ್ಮ ನೆಚ್ಚಿನ ಅಧಿಕಾರಿಗೆ ಹಮ್ಮಿಕೊಂಡ ಬೀಳ್ಕೊಡುಗೆ ಸಮಾರಂಭವು ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು.

ಗುರುವಾರ ಸಾಯಂಕಾಲ ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಶಿಕ್ಷಕರು ಸರಳವಾಗಿ ಹಮ್ಮಿಕೊಂಡ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶ್ರೀಶೈಲ ಮ್ಯಾಳೇಶಿ ಅವರು ಮಾತನಾಡುತ್ತಾ, ಈ ತಾಲೂಕಿಗೆ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಮಾರುತಿ ಹುಜರಾತಿ ಅವರು ಅಧಿಕಾರ ವಹಿಸಿಕೊಂಡು ಬಂದ ನಂತರ ತಾಲೂಕಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ವೃದ್ಧಿಯಾಗಿದೆ. ಶಿಕ್ಷಕರ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಅಲ್ಲದೆ ಮೂಲಭೂತ ಸೌಕರ್ಯಗಳಿಂದ ವಂಚಿತವಾದ ಶಾಲೆಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿ ಒಬ್ಬ ಯಶಸ್ವಿ ಹಾಗೂ ಮಾದರಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿರುವುದು ನಮ್ಮ ತಾಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.

ವರ್ಗಾವಣೆಗೊಂಡ ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಹುಜರಾತಿ ಅವರು ಮಾತನಾಡುತ್ತಾ, ಶಿಕ್ಷಕರು ಮಕ್ಕಳ ಶೈಕ್ಷಣಿಕ ಗುಣಮಟ್ಟಕ್ಕೆ ಪರಿಶ್ರಮ ಪಟ್ಟಾಗ ಅದು ನಮಗೆ ಶ್ರೀರಕ್ಷೆಯಾಗಲಿದೆ. ಯಾವುದೇ ಸಮಸ್ಯೆಗಳಿಗೆ ವಿಮುಖರಾಗದೆ ಅವುಗಳನ್ನು ಸವಾಲಾಗಿ ಸ್ವೀಕರಿಸಬೇಕು. ಈಗಾಗಲೇ ಶಿಥಿಲಾವಸ್ಥೆಯಲ್ಲಿದ್ದ ಸುಮಾರು 160 ಶಾಲಾ ಕೊಠಡಿಗಳ ಮರುನಿರ್ಮಾಣಕ್ಕೆ ಜಿಲ್ಲಾ ಉಪನಿರ್ದೇಶಕರ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಸಲಾಗಿದ್ದು ಪರಿಶೀಲನೆ ಹಂತದಲ್ಲಿದೆ. ಹಾಗೂ ಸುಮಾರು 16 ರಿಂದ 17 ಶಾಲಾ ಕೊಠಡಿಗಳ ದೊಡ್ಡ ದುರಸ್ಥಿ ಕಾರ್ಯಕ್ಕೆ ತಲಾ ಒಂದು ಕೊಠಡಿಗೆ ರೂ. 2 ಲಕ್ಷ ಅನುದಾನ ಮಂಜೂರಾತಿ ಹಂತದಲ್ಲಿದೆ. ಎಲ್ಲಾ ಶಿಕ್ಷಕರು ತಮ್ಮ (ಎಸ್.ಆರ್)ಸೇವಾ ಪುಸ್ತವನ್ನು ಎಚ್.ಆರ್.ಎಂ.ಎಸ್ ನಲ್ಲಿ ಅಪ್‍ಲೋಡ್ ಮಾಡಿಸುವಂತೆ ಸೂಚಿಸಿದ ಅವರು ನನ್ನ ಸೇವಾ ಅವಧಿಯಲ್ಲಿ ಎಲ್ಲ ಕೆಲಸ ಕಾರ್ಯಗಳಿಗೆ ಇಲ್ಲಿನ ಶಿಕ್ಷಕರು ಸಮರ್ಪಕವಾಗಿ ಸ್ಪಂದಿಸಿದ್ದಾರೆ. ಹೀಗಾಗಿ ತಮ್ಮೆಲ್ಲರ ಪ್ರೀತಿ ವಿಶ್ವಾಸ ನಾನು ಎಂದಿಗೂ ಮರೆಯುವುದಿಲ್ಲ ಎಂದು ಸ್ಮರಿಸಿದರು.

ಮುಖ್ಯ ಅತಿಥಿ ಸ್ಥಾನವನ್ನು ತಾಲೂಕಾ ಘಟಕ ಎನ್.ಜಿ.ಓ ಅಧ್ಯಕ್ಷ ರಾಜಕುಮಾರ ಗುಣಾರಿ, ತಾಲೂಕಾ ಮಖ್ಯಗುರುಗಳ ಸಂಘದ ಅಧ್ಯಕ್ಷ ಎಚ್.ಎಸ್ ಪಾಟೀಲ್, ಪ್ರೌಢ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಜಾವೀದ್ ಜುಮನಾಳ, ಪ್ರಾ.ಶಾ.ಶಿ.ಸಂ ಅಧ್ಯಕ್ಷ ಗಾಂಧಿ ದಫೇದಾರ, ಶಿ.ಪ.ಸಂ.ಸಂ ಅಧ್ಯಕ್ಷ ಶೋಭರಾಜ ಮ್ಯಾಳೇಶಿ, ದೈ.ಶಿ.ಸಂ ಅಧ್ಯಕ್ಷ ಪ್ರಕಾಶ ಚಾಂದಕವಟೆ, ಅನುದಾನಿತ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಮೇಶ ಸೊನ್ನ, ಪ್ರಾ.ಶಾ.ಶಿ. ಸಂಘದ ಉಪಾಧ್ಯಕ್ಷೆ ಕಲಾವತಿ ಮುಜಗೊಂಡ, ಪ್ರಾ.ಶಾ.ಶಿ. ಸಂಘದ ಜಿಲ್ಲಾ ಖಜಾಂಚಿ ಹೈದರ್ ಚೌಧರಿ, ತಾಲೂಕಾ ಖಜಾನಾಧಿಕಾರಿ ಬಸವರಾಜ ಕಲ್ಲೂರ, ರೇವಣಸಿದ್ದಪ್ಪ ಬಿರಾದಾರ ವಹಿಸಿಕೊಂಡರು.

ಇದೇ ವೇಳೆ ಸಂಜೀವಕುಮಾರ ಬಗಲಿ, ಬಸವರಾಜ ಜಮಾದಾರ, ನಾಗೇಶ ಗಂಗನಳ್ಳಿ, ಸಿದ್ದಾರೂಢ ಪಾಟೀಲ, ದೇವಣ್ಣ ಕಿರಸಾವಳಗಿ ಮುಂತಾದ ಶಿಕ್ಷಕರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಿವಿಧ ಶಾಲೆಗಳಿಂದ ಆಗಮಿಸಿದ ನೂರಾರು ಶಿಕ್ಷಕ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಸ್ವಾಗತವನ್ನು ನಿವೃತ್ತ ಪ್ರಭಾರಿ ದೈಹಿಕ ಶಿಕ್ಷಣಾಧಿಕಾರಿ ರಾಜಕುಮಾರ ಗೌರ ಕೋರಿದರು ಹಾಗೂ ಶಿಕ್ಷಕ ಹಣಮಂತ ಕೋರವಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.