ಭಾವಚಿತ್ರ ಅನಾವರಣ

ಲಕ್ಷ್ಮೇಶ್ವರ, ಫೆ24: 12ನೇ ಶತಮಾನದಲ್ಲಿ ಸಮ ಸಮಾನ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ, ಕಾಯಕ ಸಿದ್ಧಾಂತವನ್ನು ಪ್ರತಿಪಾದಿಸಿದ ಜಗಜ್ಯೋತಿ ಬಸವೇಶ್ವರರು ಇಡೀ ದೇಶದ ಹೆಮ್ಮೆಯ ಸಂಕೇತವಾಗಿದ್ದಾರೆ. ಕರ್ನಾಟಕ ಸರ್ಕಾರದ ಆದೇಶದಂತೆ ಅವರ ಭಾವಚಿತ್ರವನ್ನು ತಾಲೂಕ ಆಡಳಿತದಲ್ಲಿ ಅನಾವರಣ ಮಾಡಲಾಗುತ್ತಿದೆ” ಎಂದು ಲಕ್ಷ್ಮೇಶ್ವರ ತಾಲೂಕಾ ಗ್ರೇಡ್ 2 ತಹಸಿಲ್ದಾರರಾದ ಮಂಜುನಾಥ ಅಮಾಸಿ ಹೇಳಿದರು. “ವಿಶ್ವಗುರು ಬಸವಣ್ಣ- ಕರ್ನಾಟಕ ಸಾಂಸ್ಕೃತಿಕ ನಾಯಕ” ಎಂಬ ಘೋಷಣೆಯೊಂದಿಗೆ ತಾಲೂಕಾ ಆಡಳಿತದ ವತಿಯಿಂದ ಬಸವೇಶ್ವರರ ಭಾವಚಿತ್ರ ಅನಾವರಣ ಮಾಡಿ ಅವರು ಮಾತನಾಡಿದರು.
ಪ್ರೌಢಶಾಲಾ ವಿಭಾಗದ ಬಿ.ಆರ್.ಪಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಲಕ್ಷ್ಮೇಶ್ವರ ತಾಲೂಕ ಘಟಕದ ಅಧ್ಯಕ್ಷ ಈಶ್ವರ ಮೆಡ್ಲೇರಿ ಮಾತನಾಡಿ “ಇಡೀ ವಿಶ್ವಕ್ಕೆ ಪ್ರಜಾಪ್ರಭುತ್ವದ ಸ್ಪಷ್ಟ ಕಲ್ಪನೆ ನೀಡಿದವರು ಬಸವೇಶ್ವರರು. ಅನುಭವ ಮಂಟಪದ ಮೂಲಕ ವಿಶ್ವದ ಮೊದಲ ಸಂಸತ್ತನ್ನು ಜಗತ್ತಿಗೆ ಮಾದರಿಯನ್ನಾಗಿ ನೀಡಿದರು. ನಮ್ಮ ಸಂವಿಧಾನದ ಆಶಯಗಳಿಗೆ ಅವರ ಚಿಂತನೆಗಳು ಅತ್ಯಂತ ಸಮರ್ಥನೀಯವಾದ ನೆಲೆ ಒದಗಿಸಿವೆ. ಈ ಹಿನ್ನೆಲೆಯಲ್ಲಿ ಸರಕಾರದ ಈ ಕ್ರಮ ಅತ್ಯಂತ ಸ್ತುತ್ಯಾರ್ಹ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಉಪತಹಸೀಲ್ದಾರ ಪಿ.ಬಿ.ಕಿಮಾಯಿ, ಪಶುವೈದ್ಯಾಧಿಕಾರಿ ಡಾ.ಎನ್.ಎಂ.ಹವಳದ ಆರೋಗ್ಯ ಇಲಾಖೆಯ ಬಿ.ಎಸ್.ಹಿರೇಮಠ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಎಂ.ಎಂ.ಹವಳದ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶ್ರೀಮತಿ ನವಲೆ, ತಾಲೂಕಿನ ಎಲ್ಲ ಗ್ರಾಮಾಡಳಿತಾಧಿಕಾರಿಗಳು, ತಾಲೂಕಾ ಹಂತದ ಸಿಬ್ಬಂದಿ, ಕಾರ್ಯಾಲಯದ ಸಿಬ್ಬಂದಿ,ಸ್ಥಳೀಯ ಅಂಗನವಾಡಿ ಸಿಬ್ಬಂದಿ ಮುಂತಾದವರು ಉಪಸ್ಥಿತರಿದ್ದರು.
ಗ್ರಾಮಾಡಳಿತಾಧಿಕಾರಿ ನಿರ್ಮಲಾ ಕೊಪ್ಪದಮಠ ವಂದಿಸಿದರು.