ಭಾವಗೀತೆಗೆ ಹೊಸ ಆಯಾಮ ನೀಡಿದ ಡಾ.ಜಿ.ಎಸ್.ಶಿವರುದ್ರಪ್ಪ

ಕಲಬುರಗಿ,ನ.29:ಕನ್ನಡ ಸಾಹಿತ್ಯದಲ್ಲಿ ತನ್ನದೇ ಆದ ಪಾತ್ರವನ್ನು ಹೊಂದಿರುವ ಭಾವಗೀತೆಗಳನ್ನು ಹೆಚ್ಚು ರಸವತ್ತಾಗಿ, ನಿಸರ್ಗದ ಹಿನ್ನಲೆಯಲ್ಲಿ ಭಾವಪೂರ್ಣವಾಗಿ ರಚಿಸುವ ಮೂಲಕ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪನವರು ಭಾವಗೀತೆಗೆ ಹೊಸ ಆಯಾಮವನ್ನು ನೀಡಿದ್ದಾರೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಖಾದ್ರಿ ಚೌಕ್‍ನಲ್ಲಿರುವ ‘ಶ್ರೇಯಸ್ ಟ್ಯುಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಜರುಗುತ್ತಿರುವ ಸರಣಿ ಕಾರ್ಯಕ್ರಮ-23ರ ‘ಕನ್ನಡ ನಾಡು-ನುಡಿಗೆ ಡಾ.ಜಿ.ಎಸ್. ಶಿವರುದ್ರಪ್ಪನವರ ಕೊಡುಗೆ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರು ಆಶಾವಾದಿಯಾಗಿರಬೇಕು. ಯಾರೂ ಕೂಡಾ ಪರಿಪೂರ್ಣರಲ್ಲ. ವಿಫಲತೆಯಲ್ಲಿ ಸಫಲತೆಯನ್ನು ಕಾಣಬೇಕು, ಕಲ್ಲು-ಮುಳ್ಳು, ಗುಡಿ-ಗುಂಡಾರಗಳಲ್ಲಿ ದೇವರನ್ನು ಹುಡುಕುವ ಬದಲು ಜೀವಿಗಳಲ್ಲಿ ಹುಡುಕಿ. ಅದಕ್ಕಾಗಿ ಪ್ರತಿಯೊಬ್ಬರು ಪರಸ್ಪರ ಪ್ರೀತಿ, ಶಾಂತಿ, ಸಹಬಾಳ್ವೆಯಿಂದ ಇರಬೇಕು. ಸಮಾಜದಲ್ಲಿ ತುಂಬಿರುವ ಮೂಢನಂಬಿಕೆ, ಕಂದಾಚಾರ, ಅಂಧಶೃದ್ಧೆಗಳಿಗೆ ಒಳಗಾಗದೆ, ಅವುಗಳ ವಿರುದ್ಧ ನಿರಂತರವಾಗಿ ಪ್ರತಿಭಟಿಸಬೇಕು ಎಂದು ತಮ್ಮ ಸಾಹಿತ್ಯದ ಮೂಲಕ ಸಮಾಜಕ್ಕೆ ಸಂದೇಶವನ್ನು ನೀಡಿದ್ದಾರೆ. ಕನ್ನಡ ಸಂಸ್ಕøತಿಯಲ್ಲಿ ವೈಚಾರಿಕತೆ, ಚಲನಶೀಲತೆಗೆ ಡಾ.ಜಿ.ಎಸ್.ಶಿವರುದ್ರಪ್ಪನವರ ನೀಡಿದ ಕೊಡುಗೆ ತುಂಬಾ ಅನನ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಅಸ್ಲಾಂ ಶೇಖ್, ಶಿವಯೋಗಪ್ಪ ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಸೋಹೆಲ್ ಶೇಖ್ ಸೇರಿದಂತೆ ಮತ್ತಿತರರಿದ್ದರು.