ಭಾಲ್ಕಿ ಸಾರ್ವಜನಿಕ ಆಸ್ಪತ್ರೆಗೆ ಚವ್ಹಾಣ ಭೇಟಿ: ಪರಿಶೀಲನೆ

ಬೀದರ:ಮೇ.16: ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಭಾಲ್ಕಿ ಸಾರ್ವಜನಿಕ ಆಸ್ಪತ್ರೆ ಭೇಟಿ ಸಂದರ್ಭದಲ್ಲಿ ಭಾಲ್ಕಿ ಪಟ್ಟಣದಲ್ಲಿ ಲಾಕ್ಡೌನ್ ಜಾರಿ ಕ್ರಮದ ಬಗ್ಗೆ ಖುದ್ದಾಗಿ ಪರಿಶೀಲಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಹೀರಾ ನಸೀಮ, ಸಹಾಯಕ ಆಯುಕ್ತೆ ಗರೀಮಾ ಪನ್ವಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿ.ಜಿ.ರೆಡ್ಡಿ ಅವರೊಂದಿಗೆ ಸಚಿವರು, ಮೊದಲಿಗೆ ಭಾಲ್ಕಿ ತಾಲ್ಲೂಕಿನಲ್ಲಿ ಕೋವಿಡ್ ಎರಡನೆ ಅಲೆ ತಡೆಗೆ ತಾಲೂಕಾಡಳಿತ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ತಹಸೀಲ್ದಾರ ಅಣ್ಣರಾವ್ ಪಾಟೀಲ ಮತ್ತು ಪೊಲೀಸ್ ಇಲಾಖಾ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ತಾವೇ ಖುದ್ದಾಗಿ ಕೆಲವು ರಸ್ತೆಗಳಲ್ಲಿ ಸಂಚರಿಸಿ ಲಾಕ್ ಡೌನ್ ಜಾರಿಯ ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.

ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಸಚಿವರು ಭೇಟಿ ನೀಡಿದರು. ಆಸ್ಪತ್ರೆಯ ಹಾಜರಾತಿ ಪುಸ್ತಕ ಪರಿಶೀಲಿಸಿ, ಎಲ್ಲ ವೈದ್ಯಾಧಿಕಾರಿಗಳು ಮತ್ತು ಆಸ್ಪತ್ರೆಯ ಸಿಬ್ಬಂದಿ ಸರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಮನವಿ ಮಾಡಿದರು.

ಭಾಲ್ಕಿ ತಾಲ್ಲೂಕಿನಲ್ಲಿ ಮುಖಂಡರಾದ ಶ್ರೀ ಡಿ.ಕೆ.ಸಿದ್ರಾಮ ಅವರ ನೇತೃತ್ವದಲ್ಲಿ ಒಂದು ಲಕ್ಷ ಜನರಿಗೆ ಉಚಿತವಾಗಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡುವ ಹಿನ್ನೆಲೆಯಲ್ಲಿ ಸಚಿವರು ಇದೆ ವೇಳೆ ಸಾಂಕೇತಿಕವಾಗಿ ಆಸ್ಪತ್ರೆಯ ಆವರಣದಲ್ಲಿ ಸಾರ್ವಜನಿಕರಿಗೆ ಮಾಸ್ಕ ಹಾಗೂ ಸ್ಯಾನಿಟೈಜರ್ ವಿತರಿಸಿದರು.

ಇದೆ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಪಕ್ಷದ ಮುಖಂಡರೊಂದಿಗೆ ಸಚಿವರು ಸಮಾಲೋಚಿಸಿದರು. ತಮ್ಮ ಸೇವಾ ಕಾರ್ಯಗಳನ್ನು ನೋಡುತ್ತಿದ್ದೇನೆ. ನಾನು ಕೂಡ ಒಬ್ಬ ಸ್ವಯಂಸೇವಕ. ತಮ್ಮ ಸಲಹೆಗಳೆನಿದ್ದರು ನನಗೆ ತಿಳಿಸಿ ಎಂದರು. ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಶಿವಲಿಂಗ ಕುಂಬಾರ, ಶಿವರಾಜ ಗಂದಗೆ, ರೇಕು ನಾಯಕ, ರೇವಣಸಿದ್ದ ಜಾಡರ್, ಈಶ್ವರ ರುಮ್ಮಾ, ಸಂತೋಷ ಪಾಟೀಲ, ಸಂಗಮೇಶ ಟೆಂಕಾಳೆ ಸೇರಿದಂತೆ ಇತರರಿದ್ದರು.