ಭಾಲ್ಕಿ : ಸಂಭ್ರಮದಿಂದ ಎಳ್ಳಮಾವಾಸ್ಯೆ ಆಚರಣೆ

ಭಾಲ್ಕಿ:ಜ.12:ಪಟ್ಟಣ ಸೇರಿ ತಾಲೂಕಿನಾದ್ಯಂತ ಗುರುವಾರ ಎಳ್ಳಮಾವಾಸ್ಯೆ ಸಂಭ್ರಮ ಸಡಗರಿಂದ ಆಚರಣೆ ಮಾಡಲಾಯಿತು. ಬೆಳಿಗ್ಗೆಯಿಂದಲೇ ರೈತಾಪಿ ವರ್ಗದ ಜನರು ರೊಟ್ಟಿ, ಭಜ್ಜಿ ಸೇರಿ ತಿನಿಸುಗಳನ್ನು ಒಳಗೊಂಡ ಬುಟ್ಟಿಯನ್ನು ಹೊತ್ತು ತಮ್ಮ ಹೊಲಗಳತ್ತ ಮುಖ ಮಾಡಿದರು. ಬಳಿಕ ಭೂಮಿ ತಾಯಿಗೆ ಶ್ರದ್ಧೆ, ಭಕ್ತಿಯಿಂದ ಪೂಜೆ ಸಲ್ಲಿಸಿ ಚರಗ ಚೆಲ್ಲಿ ಎಳ್ಳಮಾವಾಸ್ಯೆ ಆಚರಣೆ ಮಾಡಿದರು.

ರೈತರು ಬಂಧುಗಳು, ಸ್ನೇಹಿತರು ಸಾಮೂಹಿಕವಾಗಿ ಭಜ್ಜಿ, ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಜೋಳದ ಅನ್ನ, ಕರ್ಚಿಕಾಯಿ, ಅಂಬಲಿ ಮೊದಲಾದ ಖಾದ್ಯಗಳನ್ನು ಸವಿದರು. ಮಕ್ಕಳು ಹೊಸ ಬಟ್ಟೆ ಧರಿಸಿ ಗಾಳಿಪಟ ಹಾರಿಸಿ ಸಂಭ್ರಮಿಸಿದರೇ ಮಹಿಳೆಯರು ಜೋಕಾಲಿ ಆಡಿ ಖುಷಿ ಪಟ್ಟರು. ಬಳಿಕ ಸಂಜೆ ಆಗುತ್ತಲೇ ಎಲ್ಲರೂ ತಮ್ಮ ಮನೆಯತ್ತ ಧಾವಿಸಿದರು.

ಡೋಣಗಾಪೂರದಲ್ಲಿ ಒಕ್ಕಲಿಗ ಮುದ್ದಣ್ಣ ಜಯಂತಿ
ತಾಲೂಕಿನ ಡೋಣಗಾಪೂರ ಗ್ರಾಮದ ಶ್ರೀಮಠದ ಹೊಲದಲ್ಲಿ ಒಕ್ಕಲಿಗ ಮುದ್ದಣ ಜಯಂತಿ ಮತ್ತು ಎಳ್ಳಮಾವಾಸ್ಯೆ ಸಂಭ್ರಮದಿಂದ ಆಚರಿಸಲಾಯಿತು. ಹಿರೇಮಠ ಸಂಸ್ಥಾನದ ಹಾನಗಲ್ ಕುಮಾರೇಶ್ವರ ಪ್ರಸಾದ ನಿಲಯದ ನೂರಾರು ಮಕ್ಕಳು ಎಳ್ಳಮಾವಾಸ್ಯೆ ಸಂಭ್ರಮ ಹೆಚ್ಚಿಸಿದರು.

ಕಾರ್ಯಕ್ರಮದ ಸಾನ್ನಿದ್ಯ ವಹಿಸಿದ ಬಸವಲಿಂಗ ದೇವರು ಮಾತನಾಡಿ, 12ನೇ ಶತಮಾನದಲ್ಲಿ ಬಸವಾದಿ ಶರಣರು ಕೃಷಿ ಕಾಯಕಕ್ಕೂ ಆದ್ಯತೆ ನೀಡಿದರು. ಶರಣ ಒಕ್ಕಲಿಗ ಮುದ್ದಣ್ಣ ಅವರು ಒಕ್ಕಲುತನದಲ್ಲಿ ತೊಡಗಿಸಿಕೊಂಡು ಕೃಷಿ ಕಾಯಕದ ಶ್ರೇಷ್ಠತೆ ಸಾರಿದರು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗುರುಪ್ರಸಾದ ಶಾಲೆಯ ಮುಖ್ಯಶಿಕ್ಷಕ ಬಾಬು ಬೆಲ್ದಾಳ, ಶಿಕ್ಷಕರಾದ ವೈಜಿನಾಥ ಪಂಚಾಳ, ಶಾಮರಾವ ದೊಡ್ಡೆ, ಶಿವಕುಮಾರ, ಅಂಬಾಜಿ ಸೇರಿದಂತೆ ಹಲವರು ಇದ್ದರು.