ಭಾಲ್ಕಿ:ಜು.4:ರಾಜ್ಯ,ರಾಷ್ಟ್ರ,ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ರೋಟರಿ ಕ್ಲಬ್‍ನ ಸೇವೆಗಳು ನಿಸ್ವಾರ್ಥ ಭಾವನೆಯಿಂದ ಕೂಡಿವೆ ಎಂದು ಮಾಜಿ ಎಜಿ ಡಾ.ಅಮೀತ ಅಷ್ಟೂರೆ ಅಭಿಪ್ರಾಯಪಟ್ಟರು.
ಬೀದರ್-ಮನ್ನಾಖೇಳಿ ರಸ್ತೆಯ ವಿಂಟೇಜ್ ರೆಸಾರ್ಟ್‍ನಲ್ಲಿ ಹಮ್ಮಿಕೊಂಡ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು,ರೋಟರಿ ಕ್ಲಬ್‍ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ನೀಡಲಾಗುತ್ತಿದ್ದು, ರೋಟರಿ ಕ್ಲಬ್‍ನ ಸಾಮಾಜಿಕ ಕಾರ್ಯ ಅನುಕರಣೀಯ ಮತ್ತು ಪ್ರಶಂಸನೀಯವಾಗಿದೆ. ದೇಶದ ಪ್ರಗತಿಗಾಗಿ ಸಾಕ್ಷರತೆ ಪ್ರಮಾಣ ಹೆಚ್ಚಿಸುವುದು ಅಗತ್ಯವಾಗಿದೆ. ಈ ದಿಶೆಯಲ್ಲಿ ರೋಟರಿ ಕ್ಲಬ್ ಕಾರ್ಯನಿರ್ವಹಿಸುತ್ತಿದೆ ಎಂದರು.
ಬೀದರ ರೋಟರಿ ಕ್ಲಬ್‍ನ ನೃಪತುಂಗ ಝೋನ ಮಾಜಿ ಎಜಿ ಜಹೀರ್ ಅನ್ವರ್ ಮುಲ್ತಾನಿ ಮಾತನಾಡಿ, ಮನುಷ್ಯ ಕಾಯಕ ತತ್ವದೊಂದಿಗೆ ಸಮಾಜ ಸೇವೆ ಮಾಡುವ ಗುಣ ಹೊಂದಿರಬೇಕು.ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸಲ್ಲಿಸುವ ಸೇವೆಗಳಿಗೆ ವಿಶ್ವದೆಲ್ಲೆಡೆ ಮಾನ್ಯತೆ ದೊರೆಯುತ್ತದೆ ಎಂದು ಹೇಳಿದರು.
ಇನಸ್ಟಾಲೇಷನ್ ಅಧಿಕಾರಿಯಾದ ಕಲ್ಯಾಣ ಝೋನದ ರೋಟರಿ ಸಹಾಯಕ ಗವರ್ನರ ಡಾ.ವಸಂತ ಪವಾರ,ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ, ರೋಟರಿ ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು, ಸಮಾಜದ ಬೇರೆ ಬೇರೆ ಕ್ಷೇತ್ರಗಳಲ್ಲಿ ಸೇವಾನಿರತ ಸಹೃದಯಿಗಳನ್ನು ಒಂದೆಡೆ ಸೇರಿಸಿ ಸೇವಾ ಚಟುವಟಿಕೆ ನಡೆಸಲಾಗುತ್ತದೆ. ಸಮಾಜದ ಹಿತಕ್ಕಾಗಿ ಮಾಡುವ ಎಲ್ಲ ರೋಟರಿ ಕಾರ್ಯಗಳಿಗೆ ಸದಾ ನನ್ನ ಸಹಾಯ,ಸಹಕಾರ,ಪ್ರೋತ್ಸಾಹ ಮತ್ತು ಬೆಂಬಲ ಇರುತ್ತದೆ ಎಂದು ತಿಳಿಸಿದರು.
ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ಡಾ.ವಿಲಾಸ ಕನಸೆ, ಪ್ರ.ಕಾರ್ಯದರ್ಶಿ ನ್ಯಾಯವಾದಿ ಸಾಗರ ನಾಯಕ್,ಖಜಾಂಚಿಯಾಗಿ ಡಾ.ಶಶಿಕಾಂತ ಭೂರೆ ಆಯ್ಕೆಗೊಂಡಿದ್ದಾರೆ.
ನಿಕಟಪೂರ್ವ ರೋಟರಿ ಅಧ್ಯಕ್ಷ ಡಾ.ಮಾಣಿಕ ಪ್ರಭು ಕೋಟೆ ಮಾತನಾಡಿ,ಒಂದು ವರ್ಷದ ಅವಧಿಯಲ್ಲಿ ಎಲ್ಲರ ಸಹಕಾರದಿಂದ ರೋಟರಿ ಕಾರ್ಯಗಳು ಯಶಸ್ವಿಯಾಗಿ ನಡೆದಿವೆ ಎಂದು ತಿಳಿಸಿದರು.
ನೂತನ ಸದಸ್ಯರು:ಡಾ.ಸಜ್ಜಲ್ ಬಳತೆ,ಡಾ.ಶರತ ತುಕದೆ,ಮಾನಸಿ ಅವರು ರೋಟರಿ ಕ್ಲಬ್‍ನ ನೂತನ ಸದಸ್ಯತ್ವ ಪಡೆದುಕೊಂಡರು.
ಜಿಪಂ ಮಾಜಿ ಸದಸ್ಯ ಭಾರತಬಾಯಿ ಕನಸೆ,ನಿಟಕ ಪೂರ್ವ ಕಾರ್ಯದರ್ಶಿ ಅಶ್ವೀನ್ ಭೋಸ್ಲೆ,ಖಜಾಂಚಿ ಡಾ.ಗುಂಡೇರಾವ ಶೇಡೋಳೆ,ಬೀದರ ರೋಟರಿ ಅಧ್ಯಕ್ಷ ಸಂಗಮೇಶ ಅಣದೂರೆ,ಕಾರ್ಯದರ್ಶಿ ಗುಂಡಪ್ಪ
ಯುವ ನಾಯಕ ಜಗದೀಶ ಖಂಡ್ರೆ ಸೇರಿದಂತೆ ರೋಟರಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕು.ಅನುಶ್ರೀ ಸುಕಾಳೆ ಮತ್ತು ಪುಟ್ಟ ಸಿದ್ದೇಶ ಅಷ್ಟೂರೆ,ಅತೂಲ್ ಹುಲಸೂರೆ ಸೇರಿದಂತೆ ಇತರೆ ರೋಟರಿ ಕ್ಲಬ್‍ನ ಸದಸ್ಯರ ಮಕ್ಕಳು ತಮ್ಮಲ್ಲಿರುವ ಸೂಪ್ತ ಪ್ರತಿಭೆ ಹೊರಹಾಕಿ ಎಲ್ಲರನ್ನು ನಗೆಗಡಲಲ್ಲಿ ಮುಳುಗಿಸಿ,ಎಲ್ಲರ ಗಮನ ಸೆಳೆದರು.
ನ್ಯಾಯವಾದಿ ಉಮಾಕಾಂತ ವಾರದ ಸ್ವಾಗತಿಸಿದರು.ಡಾ.ಅನೀಲ ಸುಕಾಳೆ ನಿರೂಪಿಸಿದರು.ಬೆಂಗಳೂರು ಜಿಲ್ಲಾ ಅಂಕಿತಾಧಿಕಾರಿ ಡಾ.ಸಂತೋಷ ಕಾಳೆ ವಂದಿಸಿದರು.
“ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಿಸ್ವಾರ್ಥ ಭಾವನೆಯಿಂದ ಸೇವೆಗೈಯುತ್ತಿರುವ ರೋಟರಿ ಕ್ಲಬ್‍ನ ಕಾರ್ಯ ವಿಶ್ವದಾದ್ಯಂತ ವರ್ಣನಾತೀತವಾಗಿದೆ.ಭಾಲ್ಕಿ ರೋಟರಿ ಕ್ಲಬ್‍ನ ಪದಾಧಿಕಾರಿಗಳು ಸಮಾಜದಲ್ಲಿನ ಮೌಢ್ಯತೆ,ಅಂಧಾನುಕರಣೆ,ಅನಕ್ಷರತೆ ಅಳಿಸಿ , ಸರ್ಕಾರಿ ಶಾಲೆಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿ,ಶಾಲಾ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಲಾಗುವುದು.ಈ ನಿಟ್ಟಿನಲ್ಲಿ ಸರ್ವರ ಸಹಕಾರ ಅಗತ್ಯ.”-ಡಾ.ವಿಲಾಸ ಕನಸೆ ನೂತನ ಅಧ್ಯಕ್ಷರು,ರೋಟರಿ ಕ್ಲಬ್ ಭಾಲ್ಕಿ.