ಭಾಲ್ಕಿ-ಬೆಂಗಳೂರಿಗೆ ನಿತ್ಯ ಬಸ್ ಸೌಲಭ್ಯ

ಭಾಲ್ಕಿ:ಸೆ.27: ಭಾಲ್ಕಿ-ಬೆಂಗಳೂರು ಸಂಪರ್ಕ ಕಲ್ಪಿಸುವ ನೂತನ ಸ್ಲೀಪರ್ ಬಸ್ ಸೇವೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಚಾಲನೆ ನೀಡಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ(ಕೆಕೆಆರ್‍ಟಿಸಿ)ಯ ಅಮೋಘವರ್ಷ ಹೆಸರಿನ ನೂತನ ಎರಡು ನಾನ್ ಎಸಿ ಸ್ಲೀಪರ್ ಬಸ್ ಸೇವೆಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ನಂತರ ಮಾತನಾಡಿದ ಸಚಿವರು, ತಾಲೂಕು ಸೇರಿ ನೆರೆಯ ತಾಲೂಕಿನಿಂದ ರಾಜಧಾನಿ ಬೆಂಗಳೂರು ನಗರಕ್ಕೆ ಓಡಾಡುವ ಪ್ರಯಾಣಿಕರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಹಾಗಾಗಿ ಭಾಲ್ಕಿಯಿಂದ ನೆರವಾಗಿ ಬೆಂಗಳೂರಿಗೆ ಬಸ್ ಸಂಚಾರ ಆರಂಭಿಸಬೇಕು ಎನ್ನುವುದು ಪ್ರಯಾಣಿಕರ ಬಹುದಿನಗಳ ಬೇಡಿಕೆ ಆಗಿತ್ತು.
ಹಾಗಾಗಿ ವಿಶೇಷ ಮುತುವರ್ಜಿ ವಹಿಸಿ ಸಾರಿಗೆ ಅಧಿಕಾರಿಗಳ ಮೇಲೆ ಒತ್ತಡ ತಂದು ಭಾಲ್ಕಿ-ಬೆಂಗಳೂರು ಮಧ್ಯೆ ಹೊಸದಾಗಿ ನಿತ್ಯ ಎರಡು ಬಸ್ ಸಂಚಾರ ಆರಂಭಿಸಿವೆ. ಪ್ರಯಾಣಿಕರು, ವ್ಯಾಪಾರಸ್ಥರು, ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಕಾಂತ ಫುಲೇಕರ್ ಮಾತನಾಡಿ, ಭಾಲ್ಕಿ-ಬೆಂಗಳೂರು ಮಧ್ಯೆ ಪ್ರತಿದಿನ ಎರಡು ನಾನ್ ಎಸಿ ಸ್ಲೀಪರ್ ಬಸ್ ಸಂಚರಿಸಲಿವೆ. ಭಾಲ್ಕಿಯಿಂದ ಪ್ರತಿದಿನ ಮಧ್ಯಾಹ್ನ 3.40ಕ್ಕೆ ಹೊರಟು ವಾಯಾ ಹೈದ್ರಾಬಾದ್ ಮಾರ್ಗವಾಗಿ ಮರುದಿನ ಬೆಳಿಗ್ಗೆ 6ಕ್ಕೆ ಬೆಂಗಳೂರು ತಲುಪುಲಿದೆ. ಜತೆಗೆ ಬೆಂಗಳೂರಿನಿಂದ ಸಂಜೆ 6ಕ್ಕೆ ಹೊರಟು ಮರುದಿನ ಬೆಳಿಗ್ಗೆ 9ಕ್ಕೆ ತಲುಪಲಿದೆ ಎಂದು ಮಾಹಿತಿ ನೀಡಿದರು.
ಸ್ಥಳೀಯ ಬಸ್ ಡಿಪೆÇೀ ವ್ಯವಸ್ಥಾಪಕ ಭದ್ರಪ್ಪ ಹುಡಗೆ ಮಾತನಾಡಿ, ಭಾಲ್ಕಿ-ಬೆಂಗಳೂರು ಬಸ್ ಸೇವೆ ಜತೆಗೆ ತಡೆರಹಿತ ಭಾಲ್ಕಿ-ಬೀದರ್, ಭಾಲ್ಕಿ-ಮುಗಳಖೋಡ ಮತ್ತು ಭಾಲ್ಕಿ-ಕೊಪ್ಪಳ ನಡುವೆಯು ಹೊಸದಾಗಿ ಬಸ್ ಸೇವೆ ಆರಂಭಿಸಲಾಗಿದೆ. ಪ್ರಯಾಣಿಕರು ಸದುಪಯೋಗ ಪಡೆದು ಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಾರಿಗೆ ಇಲಾಖೆಯ ತಾಂತ್ರಿಕ ಶಿಲ್ಪಿ ಚಂದ್ರಕಾಂತ, ವಿಭಾಗೀಯ ಸಂಚಾರಾಧಿಕಾರಿ ಇಂದ್ರಸೇನ್ ಬಿರಾದಾರ್, ಎಂಜನಿಯರ್ ಪತ್ತಾರ್ ಇದ್ದರು.