ಭಾಲ್ಕಿ ತಾಲೂಕಿನ 160 ಜನವಸತಿ ಪ್ರದೇಶಗಳಿಗೆ ರಸ್ತೆ ಭಾಗ್ಯ

ಭಾಲ್ಕಿ:ಮಾ.24: ಪಟ್ಟಣದ ವಿವಿಧೆಡೆ ನಗರೋತ್ಥಾನ ಸೇರಿ ವಿವಿಧ ಯೋಜನೆಯಡಿ ಸುಮಾರು 10 ಕೋಟಿ ರೂ ವೆಚ್ಚದಲ್ಲಿ 22ಕ್ಕೂ ಅಧಿಕ ಬಡಾವಣೆಗಳಲ್ಲಿ ರಸ್ತೆ, ಚರಂಡಿ, ರಾಜ ಕಾಲುವೆ, ವಿದ್ಯುತ್ ದೀಪ, ಕಂಬ ಅಳವಡಿಕೆ, ಕಾಂಪೌಂಡ, ಸಮುದಾಯ ಭವನ, ಸ್ಮಶಾನ ಭೂಮಿ ನಿರ್ಮಾಣ ಸೇರಿ ನಾನಾ ಕಾಮಗಾರಿಗಳಿಗೆ ಶಾಸಕ ಈಶ್ವರ ಖಂಡ್ರೆ ಚಾಲನೆ ನೀಡಿದರು.

ಪಟ್ಟಣದ ಲೆಕ್ಚರ್ ಕಾಲೋನಿಯಲ್ಲಿ ಜಿಲ್ಲಾ ಪಂಚಾಯಿತಿಯ 40 ಲಕ್ಷ ರೂ ಅನುದಾನದಲ್ಲಿ ಸೈದಾಪೂರ ವಾಡಿ ವರೆಗಿನ ರಸ್ತೆ ನಿರ್ಮಾಣ ಕಾಮಗಾರಿಗೆ ಗುರುವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಪಟ್ಟಣ ಹಿಂದಿಗಿಂತಲೂ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಕಳೆದ ಮೂರು ಅವಧಿಯಿಂದ ಕ್ಷೇತ್ರದ ಜನರ ಆಶೀರ್ವಾದಿಂದ ಶಾಸಕನಾಗಿ ಕೆಲಸ ಮಾಡುತ್ತಿದ್ದು, ವಿವಿಧ ಯೋಜನೆಯಡಿ ಕೋಟ್ಯಂತರ ರೂ ಅನುದಾನ ತಂದು ಪಟ್ಟಣ ಸೇರಿ ತಾಲೂಕು ಅಭಿವೃದ್ಧಿ ಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ.

ಪಟ್ಟಣದಲ್ಲಿ ರಸ್ತೆ, ಚರಂಡಿ, ಉದ್ಯಾನವನ, ವಿಭಜಕಗಳು ನಿರ್ಮಾಣ, ಬೀದಿದೀಪ ಅಳವಡಿಕೆ, ಕಸ ವಿಲೇವಾರಿ ಸೇರಿ ವಿವಿಧ ಅಭಿವೃದ್ಧಿಪರ ಕೆಲಸಗಳಿಗೆ ಆದ್ಯತೆ ನೀಡಿದ್ದೇನೆ. 15 ವರ್ಷಗಳಿಂದ ತಾಲೂಕಿನಲ್ಲಿ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿದ್ದು, ತಾಲೂಕಿನ ಗ್ರಾಮಗಳು, ತಾಂಡಾಗಳು ಸೇರಿ 160 ಜನ ವಸತಿ ಪ್ರದೇಶಗಳಿಗೆ ರಸ್ತೆ ಭಾಗ್ಯ ಕಲ್ಪಿಸಲಾಗಿದೆ. ಗ್ರಾಮೀಣ ಭಾಗಗಳಲ್ಲಿಯು ಗುಣಮಟ್ಟದ ರಸ್ತೆಗಳು ನಿರ್ಮಾಣ ಮಾಡಲಾಗಿದೆ. ರೈತರ ಹೊಲ ಗದ್ದೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಕೂಡ ಅಭಿವೃದ್ಧಿ ಪಡಿಸಲಾಗಿದೆ.

ಇದರಿಂದ ರೈತರ ಆದಾಯ ಹೆಚ್ಚುತ್ತಿದೆ. ನೀರಾವರಿ ಪ್ರದೇಶಗಳಿಗೆ ಉತ್ತೇಜನ ನೀಡಲಾಗಿದೆ. ಈ ಹಿಂದೆ ತಾಲೂಕಿನಲ್ಲಿ 90 ಮಿಲಿಯನ್ ಮಾತ್ರ ರೈತರು ಉಪಯೋಗ ಮಾಡುತ್ತಿದ್ದರು. ಇದೀಗ 180 ಮಿಲಿಯನ್‍ನಷ್ಟು ರೈತರು ವಿದ್ಯುತ್ ಬಳಕೆ ಮಾಡುತ್ತಿರುವುದು ನೋಡಿದರೇ ರೈತರು ಸ್ವಾವಲಂಬಿಗಳಾಗಿ ಬೆಳೆಯತ್ತಿದ್ದಾರೆ ಸಂತಸ ವ್ಯಕ್ತ ಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶ ಮಾಶೆಟ್ಟೆ ಮಾತನಾಡಿದರು.

ಈ ಸಂದರ್ಭದಲ್ಲಿ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ ಚವ್ಹಾಣ, ಪುರಸಭೆ ಅಧ್ಯಕ್ಷ ಅನಿಲ ಸುಂಟೆ, ಉಪಾಧ್ಯಕ್ಷ ಅಶೋಕ ಗಾಯಕವಾಡ್, ಸದಸ್ಯರಾದ ಬಸವರಾಜ ವಂಕೆ, ರಾಹುಲ ಪೂಜಾರಿ, ಗುತ್ತಿಗೆದಾರ ಚನ್ನಬಸವ ಬಳತೆ, ಕುಪೇಂದ್ರ ವಂಕೆ, ಚಂದು ವಂಕೆ ಸೇರಿದಂತೆ ಹಲವರು ಇದ್ದರು.

================

ಮಂಜೂರಾತಿ ಮನೆ ನಿಲ್ಲಿಸಿದ್ದು ಕೇಂದ್ರದ ಮಂತ್ರಿ ಖೂಬಾ ಸಾಧನೆ

ಇಲ್ಲಿಯ ಬೌದ್ಧ ವಿಹಾರ ಪ್ರದೇಶದಲ್ಲಿ 95 ಲಕ್ಷ ರೂ ವೆಚ್ಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನದ ಎರಡನೇ ಮಹಡಿ ನಿರ್ಮಾಣ ಕಾಮಗಾರಿಗೆ ಶಾಸಕ ಈಶ್ವರ ಖಂಡ್ರೆ ಚಾಲನೆ ನೀಡಿದರು. ಈ ಹಿಂದೆಯು ಅಂಬೇಡ್ಕರ್ ಭವನ ನಿರ್ಮಾಣಕ್ಕೆ 1 ಕೋಟಿ ರೂ ಅನುದಾನ ನೀಡಿದ್ದೇನೆ. ಸಮುದಾಯದ ಜನರ ಬೇಡಿಕೆಯಂತೆ ಬಾಕಿ ಉಳಿದಿರುವ ಕಾಮಗಾರಿ ಪೂರ್ಣಗೊಳಿಸಲು 95 ಲಕ್ಷ ರೂ ಅನುದಾನ ಒದಗಿಸಿದ್ದೇನೆ.

ಆದರೂ ಇನ್ನೂ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಕಡಿಮೆ ಇದೆ. ಮುಂದೆಯು ಅಗತ್ಯ ಬಿದ್ದರೇ ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದ ಅವರು, ರಾಜ್ಯದಲ್ಲಿನ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ನೇಮಕಾತಿ, ವರ್ಗಾವಣೆಯಲ್ಲಿ ಅಕ್ರಮ ನಡೆಸಿದೆ ಎಂದು ಆರೋಪಿಸಿದರು.

ತಾಲೂಕು ಗುಡಿಸಲು ಮುಕ್ತಗೊಳಿಸುವ ನಿಟ್ಟಿನಲ್ಲಿ ಇದು ವರೆಗೂ ಸುಮಾರು 25 ಸಾವಿರ ಮನೆ ಮಂಜೂರು ಮಾಡಿಸಿದ್ದೇನೆ. ಆದರೆ ಕೇಂದ್ರದ ಸಚಿವ ಖೂಬಾ ಅವರು ಸೇಡಿನ ರಾಜಕಾರಣದಿಂದ ತಾಲೂಕು ಮಂಜೂರಾದ ಮನೆಗಳ ಅನುದಾನ ತಡೆ ಹಿಡಿದು ಬಡವರ ಹೊಟ್ಟೆ ಮೇಲೆ ಹೊಡೆದಿದ್ದಾರೆ.

ರಾಜ್ಯ ಮತ್ತು ಕೇಂದ್ರದಲ್ಲಿ ನಿಮ್ಮದೇ ಸರಕಾರ ಇತ್ತು ಬೇಕಿದ್ದರೇ ನನಗಿಂತಲೂ ಹೆಚ್ಚು ಮನೆ ತರಬೇಕಿತ್ತು. ಅದನ್ನು ಬಿಟ್ಟು ಮಂಜೂರಾದ ಮನೆಗಳನ್ನು ನಿಲ್ಲಿಸಿದ್ದು ಕೇಂದ್ರದ ಸಚಿವ ಖೂಬಾ ಸಾಧನೆ ಎಂದು ಲೇವಡಿ ಮಾಡಿದರು.

ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಿಲಾಸ ಮೋರೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜ್ಞಾನಸಾಗರ ಭಂತೇಜಿ ಸಾನ್ನಿಧ್ಯ ವಹಿಸಿದರು.

ಈ ಸಂದರ್ಭದಲ್ಲಿ ವಿಜಯಕುಮಾರ ಗಾಯಕವಾಡ್, ಡಾ.ಬಾಬುರಾವ ಆಣದೂರು, ರಾಜಕುಮಾರ ಮೋರೆ, ಮಾಣಿಕಪ್ಪ ರೇಷ್ಮೆ, ಮಾರುತಿ ಭಾವಿಕಟ್ಟಿ, ಪ್ರಕಾಶ ಭಾವಿಕಟ್ಟಿ, ಶಶಿಕಲಾ, ಪ್ರಶಾಂತ ಕೋಟಗೀರಾ, ಧನರಾಜ ಕುಂದೆ, ವಿಜಯಕುಮಾರ ರಾಜಭವನ ಸೇರಿದಂತೆ ಹಲವರು ಇದ್ದರು. ಶಿವಕುಮಾರ ಮೇತ್ರೆ ಸ್ವಾಗತಿಸಿದರು. ಕೈಲಾಸ ಭಾವಿಕಟ್ಟಿ ನಿರೂಪಿಸಿದರು.

ಕಾಮಗಾರಿಗಳ ವಿವರ :

ಮಹಾತ್ಮ ಗಾಂಧಿ-ಅಂಬೇಡ್ಕರ ವೃತ್ತದ ರಸ್ತೆ 60 ಲಕ್ಷ ರೂ, ಅಂಬೇಡ್ಕರ್ ವೃತ್ತ-ಬೀದರ್ ಬೇಸ್ ಬಿಟಿ ರಸ್ತೆ, ವಿದ್ಯುತ್ ಕಂಬ 55 ಲಕ್ಷ ರೂ, ವಿಜಯ ಮಹಾಂತೇಶ್ವರ ಕಾಲೋನಿ ಸಿಸಿ ರಸ್ತೆ, ಚರಂಡಿ 30 ಲಕ್ಷ ರೂ, ಅಶೋಕ ನಗರ-ಹಿರೇಮಠ ಗಲ್ಲಿ ಸಿಸಿ ರಸ್ತೆ ಚರಂಡಿ 40 ಲಕ್ಷ ರೂ, ವಾರ್ಡ್-3ರ ಪೀರಕಟ್ಟ ಗಲ್ಲಿ-ಕೈಕಾಡಿ ಗಲ್ಲಿ ಸಿಸಿ ರಸ್ತೆ, ಚರಂಡಿ 40 ಲಕ್ಷ ರೂ, ಬಸ್ ನಿಲ್ದಾಣ-ರಾಜ ಕಾಲುವೆ ಚರಂಡಿ 70 ಲಕ್ಷ ರೂ, ವಿದ್ಯಾನಗರ ಸಿಸಿ ರಸ್ತೆ, ಚರಂಡಿ 30 ಲಕ್ಷ ರೂ, ಚನ್ನಬಸವೇಶ್ವರ ಕಾಲೋನಿ-ಲೆಕ್ಚರ್ ಕಾಲೋನಿ ಬಿಟಿ ರಸ್ತೆ, ವಿದ್ಯುತ್ ಕಂಬ, ಸೇತುವೆ 55 ಲಕ್ಷ ರೂ, ವಾರ್ಡ್-11ರ ರಸ್ತೆ, ಚರಂಡಿ, ಸ್ಮಶಾನ ಭೂಮಿ, ಕಾಂಪೌಂಡ 99.32 ಲಕ್ಷ ರೂ, ಲೆಕ್ಚರ ಕಾಲೋನಿ ರೈಲ್ವೆ ಸ್ಟೇಶನ್ ರಸ್ತೆ, ಬಿಟಿ ರಸ್ತೆ, ಸಿಸಿ ಚರಂಡಿ, ವಿದ್ಯುತ್ ಕಂಬ 70, ಅಥರ್ವ ಶಾಲೆ ಸಿಸಿ ರಸ್ತೆ, ಚರಂಡಿ 37.50 ಲಕ್ಷ ರೂ, ಪಾತ್ರೆ ಗಲ್ಲಿ ಮಾಸುಮ ಪಾಶಾ ಕಾಲೋನಿ ರಸ್ತೆ, ಚರಂಡಿ 37.93 ಲಕ್ಷ ರೂ, ಭೀಮನಗರ-ಮುಲ್ತಾನಿ ಭಾಷಾ ಕಾಲೋನಿ ಸಿಸಿ ರಸ್ತೆ,ಚರಂಡಿ,ಸ್ಮಶಾನಭೂಮಿ,ಕಾಂಪೌಂಡ 37.93 ಲಕ್ಷ ರೂ, ಸಾಯಿನಗರ-ಭಾಟನಗರ ಸಿಸಿ ರಸ್ತೆ 57.61 ಲಕ್ಷ ರೂ, ಪನಶೆಟ್ಟ ನಗರ ಸಿಸಿ ರಸ್ತೆ, ಚರಂಡಿ 25 ಲಕ್ಷ ರೂ, ಭಾತಂಬ್ರಾ ಮುಖ್ಯ ರಸ್ತೆ ಸರ್ವೋದಯ ಶಾಲೆ, ಕೆರೆ 85 ಲಕ್ಷ ರೂ, ಖಂಡ್ರೆ ತಾಂಡಾ-ಹೊಸ ತಾಂಡಾ ಸಿಸಿ ರಸ್ತೆ ಚರಂಡಿ 50 ಲಕ್ಷ ರೂ ವೆಚ್ಚದ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.