
ಭಾಲ್ಕಿ:ಮೇ.11: ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಗೆ ಬುಧವಾರ ಶಾಂತಿಯುತ ಮತದಾನ ನಡೆಯಿತು. ಪಟ್ಟಣ ಸೇರಿ ತಾಲೂಕಿನಾದ್ಯಂತ 263 ಬೂತ್ ಗಳಲ್ಲಿ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಬೆಳಿಗ್ಗೆಯಿಂದಲೇ ಮತದಾನ ಬಿರುಸು ಪಡೆದು ಕೊಂಡಿತು. ಎಲ್ಲ ಮತಗಟ್ಟೆಗಳಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಹಿರಿಯರು, ಮಹಿಳೆಯರು, ಯುವಕರು ತಮ್ಮ ಹಕ್ಕು ಚಲಾಯಿಸಿದರು.
ಹಿರಿಯರು, ಅಂಗವಿಕಲರು ವಿಲ್ ಚೇರ್ ಮೇಲೆ ಬಂದು ಮತ ಚಲಾಯಿಸಿರುವ ದೃಶ್ಯ ಕಂಡು ಬಂತು. ಯಾವುದೇ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ. ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಕಣದಲ್ಲಿ 13 ಅಭ್ಯರ್ಥಿಗಳು ಇದ್ದರೂ ಕೂಡ ಈ ಬಾರಿ ಕಾಂಗ್ರೆಸ್-ಬಿಜೆಪಿ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದೆ. ಅಭ್ಯರ್ಥಿಗಳ ಭವಿಷ್ಯ ಮತದಾರರು ವಿದ್ಯುನ್ಮಾನ ಮತಯಂತ್ರಗಳಲ್ಲಿ ಬರೆದಿದ್ದು 13 ರಂದು ಬಹಿರಂಗ ಆಗಲಿದೆ.
ಮತ ಹಾಕಿದ ಶ್ರೀಗಳು
ಇಲ್ಲಿಯ ಹಿರೇಮಠ ಸಂಸ್ಥಾನದ ಹಿರಿಯ ಸ್ವಾಮೀಜಿ ಡಾ.ಬಸವಲಿಂಗ ಪಟ್ಟದ್ದೇವರು, ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಮಹಾಲಿಂಗ ಸ್ವಾಮೀಜಿ ಅವರು ಮತಗಟ್ಟೆ 114ರಲ್ಲಿ ಮತದಾನ ಮಾಡಿದರು.
ಹಕ್ಕು ಚಲಾಯಿಸಿದ ಅಭ್ಯರ್ಥಿಗಳು
ಕಾಂಗ್ರೆಸ್ ನ ಅಭ್ಯರ್ಥಿ ಈಶ್ವರ ಖಂಡ್ರೆ ಅವರು ಕೃಷಿ ಇಲಾಖೆಯ ಮತಗಟ್ಟೆಯಲ್ಲಿ ಪತ್ನಿ ಡಾ.ಗೀತಾ ಖಂಡ್ರೆ ಅವರೊಂದಿಗೆ ಬೆಳಿಗ್ಗೆ 8 ಗಂಟೆ ಸುಮಾರಿಗೆ ತಮ್ಮ ಹಕ್ಕು ಚಲಾಯಿಸಿದರು.
ಮತಗಟ್ಟೆ 117ರಲ್ಲಿ ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆ ಅವರು ಪತ್ನಿ ಉಮಾದೇವಿ ಖಂಡ್ರೆ ಅವರೊಂದಿಗೆ ಆಗಮಿಸಿ ಮತದಾನ ಮಾಡಿದರು. ಇನ್ನೂ ಬಿಜೆಪಿ ಮುಖಂಡ ಡಿ.ಕೆ.ಸಿದ್ರಾಮ ತಮ್ಮ ಸ್ವಗ್ರಾಮ ಕೇಸರ ಜವಳಗಾದಲ್ಲಿ ಮತ ಹಾಕಿದರು.