ಭಾಲ್ಕಿ ತಾಲೂಕಿನಲ್ಲಿ 229754 ಮತದಾರರು

ಭಾಲ್ಕಿ:ಎ.14: ಶಾಂತಿಯುತ, ಪಾರದರ್ಶಕ ಹಾಗೂ ನಿಷ್ಪಕ್ಷಪಾತ ಚುನಾವಣೆ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಭಾಲ್ಕಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಜಗದೇವ ಬಿ ತಿಳಿಸಿದರು. ಪಟ್ಟಣದ ತಹಸೀಲ್ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.13 ರಂದು ವಿಧಾನಸಭಾ ಚುನಾವಣಾ ಅಧಿಸೂಚನೆ ಹೊರಡಿಸಲಾಗಿದೆ. ನಾಮಪತ್ರ ಸಲ್ಲಿಕೆಗೆ ಏ.20 ಕೊನೆಯ ದಿನವಾಗಿದೆ. ರಜೆ ದಿನ ಹೊರತು ಪಡಿಸಿ ಬೆಳಿಗ್ಗೆ 11 ಗಂಟೆಯಿಂದ 3 ಗಂಟೆ ವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. 24 ರಂದು ಉಮೇದುವಾರಿಕೆ ಹಿಂಪಡೆಯಲು ಕಡೇ ದಿನವಾಗಿದೆ. ಮೇ.10 ರಂದು ಮತದಾನ ನಡೆಯಲಿದೆ. 13 ರಂದು ಮತ ಏಣಿಕೆ ಪ್ರಕ್ರಿಯೆ ನಡೆಯಲಿದೆ ಎಂದರು.
ಭಾಲ್ಕಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 229754 ಮತದಾರರಿದ್ದಾರೆ. ಈ ಪೈಕಿ 119686 ಪುರುಷರು, 110065 ಮಹಿಳಾ ಮತದಾರರು ಹಾಗು 03 ತೃತೀಯ ಲಿಂಗಿಗಳಿದ್ದಾರೆ. ಈ ವಿಧಾನಸಭಾ ಕ್ಷೇತ್ರದಲ್ಲಿ 263 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಈ ಪೈಕಿ ಪಟ್ಟಣ ಪ್ರದೇಶದಲ್ಲಿ 28 ಗ್ರಾಮೀಣ ಪ್ರದೇಶದಲ್ಲಿ 235 ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಹಾಯಕ ಚುನಾವಣಾಧಿಕಾರಿ ಪಿ.ಜಿ.ಪವಾರ್, ಸಿಬ್ಬಂದಿಗಳಾದ ರಘು ಪಿ, ಶ್ರೀಶೈಲ್ ಇದ್ದರು.
2.37 ಲಕ್ಷ ರೂ ಜಪ್ತಿ
ಚುನಾವಣೆಯಲ್ಲಿ ಅಕ್ರಮ ತಡೆಗಟ್ಟಲು ತಾಲೂಕಿನ ನಾಲ್ಕು ಕಡೆಗಳಲ್ಲಿ ತಪಾಸಣಾ ಕೇಂದ್ರ(ಚೆಕ್ ಪೋಸ್ಟ್) ತೆರೆಯಲಾಗಿದೆ. ಗಡಿ ಭಾಗದ ಅಟ್ಟರಗಾ, ವಾಂಜರಖೇಡ್, ಲಖಣಗಾಂವ ಮತ್ತು ಹಲಬರ್ಗಾ ವ್ಯಾಪ್ತಿಯಲ್ಲಿ ತಪಾಸಣೆ ಕೇಂದ್ರ ತೆರೆದು ಹೊರಗಿನಿಂದ ಬಂದು ಹೋಗುವ ಎಲ್ಲ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಹಲಬರ್ಗಾ ತಪಾಸಣಾ ಕೇಂದ್ರದಲ್ಲಿ ಇಬ್ಬರು ವ್ಯಕ್ತಿಗಳಿಂದ ಆಧಾರ ಇಲ್ಲದ 2.37 ಲಕ್ಷ ರೂ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಮಾಹಿತಿ ನೀಡಿದರು.