ಭಾಲ್ಕಿ ಚನ್ನಬಸವಾಶ್ರಮದಲ್ಲಿ ವಚನ ಭಾಷಣ ಸ್ಪರ್ಧೆ : ವಿಜೇತರಿಗೆ ಬಹುಮಾನ ವಿತರಣೆ ನ.20 ರಂದು ಬಸವಕಲ್ಯಾಣದಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆ

ಭಾಲ್ಕಿ:ನ.14: ಬಸವಕಲ್ಯಾಣ ಅನುಭವ ಮಂಟಪ ಉತ್ಸವ-2022 ಮತ್ತು 43ನೆಯ ಶರಣ ಕಮ್ಮಟ ಸಮಾರಂಭದ ಅಂಗವಾಗಿ ಇಲ್ಲಿಯ ಚನ್ನಬಸವಾಶ್ರಮ ಪರಿಸರದಲ್ಲಿ ಭಾನುವಾರ ತಾಲೂಕು ಮಟ್ಟದ ವಚನ ಭಾಷಣ ಸ್ಪರ್ಧೆ ನಡೆಯಿತು.

ಹಿರೇಮಠ ಸಂಸ್ಥಾನದ ವತಿಯಿಂದ ನಡೆದ ಸ್ಪರ್ಧೆಯಲ್ಲಿ ವಿವಿಧ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ, ವಚನ ಭಾಷಣ ಮಾಡಿ ತಮ್ಮ ಪ್ರತಿಭೆ ಪ್ರದರ್ಶಿಸಿದರು.

ಅಂತಿಮವಾಗಿ ಐವರು ವಿದ್ಯಾರ್ಥಿಗಳು ಮೊದಲ ಮೂರು ಸ್ಥಾನ ಪಡೆದು ಕೊಂಡು ಜಿಲ್ಲಾ ಮಟ್ಟದ ವಚನ ಸ್ಪರ್ಧೆಯಲ್ಲಿ ಭಾಗವಹಿಸುವ ಅರ್ಹತೆ ಗಿಟ್ಟಿಸಿ ಕೊಂಡರು.

ವಿಜೇತರಿಗೆ ಹಿರೇಮಠ ಸಂಸ್ಥಾನದ ವತಿಯಿಂದ ಕ್ರಮವಾಗಿ 1000, 500, 300 ರೂ ನಗದು ಬಹುಮಾನ ಜತೆಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.

ತಾಲೂಕು ಮಟ್ಟದಲ್ಲಿ ವಿಜೇತರಾದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ವಚನ ಭಾಷಣ ಸ್ಪರ್ಧೆಗೆ ಆಯ್ಕೆಯಾಗಿದ್ದು, ನ.20 ರಂದು ಬಸವಕಲ್ಯಾಣ ಅನುಭವ ಮಂಟಪದಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆ ನಡೆಯಲಿದೆ ಎಂದು ಆಯೋಜಕರಾದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶಂಭುಲಿಂಗ ಕಾಮಣ್ಣ, ಸಾಹಿತಿ ವೀರಣ್ಣ ಕುಂಬಾರ್ ತಿಳಿಸಿದರು.

ಈ ಸಂದರ್ಭದಲ್ಲಿ ಬಾಬು ಬೆಲ್ದಾಳ, ಶಾಂತಯ್ಯ ಸ್ವಾಮಿ, ರಾಜಕುಮಾರ ಬಚಣ್ಣ ಸೇರಿದಂತೆ ಹಲವರು ಇದ್ದರು. ಮಲ್ಲಮ್ಮ ಆರ್ ಪಾಟೀಲ್, ಕಾಶಿನಾಥ ಭೂರೆ, ಸಿಕ್ರೇಶ್ವರ ಶೆಟಕಾರ್ ತೀರ್ಪುಗಾರರಾಗಿದ್ದರು.

ವಿಜೇತರ ವಿವರ :

ಕರಡ್ಯಾಳ ಚನ್ನಬಸವೇಶ್ವರ ಗುರುಕುಲ ವಸತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪ್ರಾರ್ಥನಾ ಸಂಗಪ್ಪ(ಪ್ರಥಮ), ಬ್ಯಾಲಹಳ್ಳಿ(ಕೆ) ಬಸವತೀರ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಲೋಮಿ ಶಿವರಾಜ ಮತ್ತು ಭಾಲ್ಕಿ ಅಕ್ಕಮಹಾದೇವಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಂಜಲಿ ಬಾಬುರಾವ(ದ್ವಿತೀಯ), ಬ್ಯಾಲಹಳ್ಳಿ(ಕೆ) ಬಸವತೀರ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಪೀಟರ್ ಸಂಜುಕುಮಾರ ಮತ್ತು ಕರಡ್ಯಾಳ ಚನ್ನಬಸವೇಶ್ವರ ಗುರುಕುಲ ವಸತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪುತಳಾಬಾಯಿ ವೀರಣ್ಣ ಅವರು ತೃತೀಯ ಸ್ಥಾನ ಪಡೆದು ಕೊಂಡಿದ್ದಾರೆ.