ಭಾಲ್ಕಿ ಗೃಹಲಕ್ಷ್ಮಿ ಯೋಜನೆ ನೋಂದಣಿ ಆರಂಭ

ಭಾಲ್ಕಿ:ಜು.21:ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಲು ಭಾಲ್ಕಿ ಪಟ್ಟಣದಲ್ಲಿ ರೈತ ಭವನ,ಪುರಭವನ ಮತ್ತು ಹಳೇ ಪಟ್ಟಣದ ಚಾವಡಿಯಲ್ಲಿ ಇಂದಿನಿಂದ ಉಚಿತ ನೋಂದಣಿ ಕಾರ್ಯ ಆರಂಭಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ನಾಗಣ್ಣ ಪರೀಟ ತಿಳಿಸಿದರು.
ಪಟ್ಟಣದ ಎಪಿಎಮ್ಸಿ ಕಛೇರಿ ಹತ್ತಿರವಿರುವ ರೈತ ಭವನದಲ್ಲಿ ಜಿಲ್ಲಾಡಳಿತ ಬೀದರ,ಪುರಸಭೆ ಭಾಲ್ಕಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಭಾಲ್ಕಿ ಸಹಯೋಗದಲ್ಲಿ ಹಮ್ಮಿಕೊಂಡ ಗೃಹಲಕ್ಷ್ಮಿ ಯೋಜನೆ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಯೋಜನೆಯ ಲಾಭ ಪಡೆಯಲು ರೇಷನ್ ಕಾರ್ಡ್ ಪ್ರತಿ,ಯಜಮಾನಿ ಮತ್ತು ಆಕೆಯ ಪತಿಯ ಆಧಾರ ಕಾರ್ಡ್ ಪ್ರತಿ ಮತ್ತು ಯೋಜನೆಯ ನಗದು ಲಾಭ ಪಡೆಯಲು ಇಚ್ಚಿಸುವ ಬ್ಯಾಂಕ್ ಖಾತೆಯ ಪಾಸ್‍ಬುಕ್ ಪ್ರತಿ ನೀಡಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು.ಗಂಡ-ಹೆಂಡತಿ ಜಂಟಿ ಖಾತೆ ಹೊಂದಿದವರ ಹೆಸರಿಗೆ ಹಣ ಬರುವುದಿಲ್ಲ.ಅಂತವರು ಪ್ರತ್ಯೇಕ ಹೊಸ ಬ್ಯಾಂಕ್ ಖಾತೆ ತೆರೆದು ಯಜಮಾನಿಯ ಆಧಾರ್ ಲಿಂಕ್ ಆಗಿರುವ ಪಾಸ್‍ಬುಕ್ ಪ್ರತಿ ಒದಗಿಸಬೇಕು.ನಿಗದಿ ಪಡಿಸಿದ ವೇಳಾಪಟ್ಟಿಗನುಗುಣವಾಗಿ ನೋಂದಣಿ ಮಾಡಿಸಿಕೊಳ್ಳಬೇಕು.ಪಡಿತರ ಚೀಟಿಯಲ್ಲಿ ಪುರುಷ ಸದಸ್ಯರು ಕುಟುಂಬದ ಮುಖ್ಯಸ್ಥರಾಗಿದ್ದರೆ ಈ ಯೋಜನೆಗೆ ಅರ್ಹರಲ್ಲ.ಆರಂಭದ ದಿವಸ ತಾಂತ್ರಿಕ ದೋಷದಿಂದ ನೋಂದಣಿ ಕಾರ್ಯಕ್ಕೆ ಅಡಚಣೆಯಾಗುತ್ತಿದೆ.ಪರಿಣಿತರ ಸಲಹೆ ಪಡೆದು ನೋಂದಣಿ ಕಾರ್ಯ ಸುಗಮವಾಗಿ ನಡೆಸಲಾಗುತ್ತದೆ.ಯಾರೂ ಭಯ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ವಂಕೆ ಮಾತನಾಡಿ,ಪಡಿತರ ಚೀಟಿ ಹೊಂದಿದವರು ಸಕಾಲದಲ್ಲಿ ತಮ್ಮ ಹೆಸರು ನೋಂದಾಯಿಸಿ ಸರ್ಕಾರದ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಉಪಾಧ್ಯಕ್ಷ ಅಸೋಕ ಗಾಯಕವಾಡ,ಸದಸ್ಯ ವಿಜಯಕುಮಾರ ರಾಜಭವನ ,ಪಟ್ಟಣ ಸಮಿತಿ ತಾಲೂಕು ಕಾಂಗ್ರೆಸ್ ಅಧ್ಯಕ್ಷ ನಸೀರೋದಿನ್ ,ಪುರಸಭೆಯ ಸಂಗಮೇಶ ಕಾರಬಾರಿ,ಸಂಗಮೇಶ ಬಿರಾದಾರ ಸೇರಿದಂತೆ ಅರ್ಹ ಫಲಾನುಭವಿಗಳು ಉಪಸ್ಥಿತರಿದ್ದರು.