ಭಾಲ್ಕಿಯಿಂದ ಬಸವಕಲ್ಯಾಣದವರೆಗೆನ. 25 ಕ್ಕೆ ಕುಂಬಾರ ಗುಂಡಯ್ಯ ಜ್ಯೋತಿಯಾತ್ರೆ

ಭಾಲ್ಕಿ.ನ.18:ವಿಶ್ವಬಸವಧರ್ಮ ಟ್ರಸ್ಟ ಅನುಭವಮಂಟಪ, ಬಸವಕಲ್ಯಾಣ ವತಿಯಿಂದ ನಡೆಯುವ 43ನೇ ಶರಣ ಕಮ್ಮಟ ಅನುಭವಮಂಟಪ ಉತ್ಸವ-2022 ನಿಮಿತ್ಯ ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ದಿವ್ಯ ಮಾರ್ಗದರ್ಶನದಲ್ಲಿ ಬೀದರ ಜಿಲ್ಲೆಯ ಶರಣರ ಸ್ಥಳಗಳಿಂದ ಬಸವಕಲ್ಯಾಣಕ್ಕೆ ವಿವಿಧ ಶರಣರ ಜ್ಯೋತಿ ಯಾತ್ರೆಯನ್ನು ನಡೆಯಲಿದೆ. ಅದಕ್ಕಾಗಿ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಭಾಲ್ಕಿಯ ಮಹಾ ಶರಣ ಕುಂಬಾರ ಗುಂಡಯ್ಯನವರ ಸ್ಮಾರಕಕ್ಕೆ ಆಗಮಿಸಿ, ಭಾಲ್ಕಿಯ ಬಸವಭಕ್ತರಿಗೆ ಕುಂಬಾರ ಗುಂಡಯ್ಯ ಜ್ಯೋತಿಯನ್ನು ನೀಡಿದರು. ಈ ಸಮಾರಂಭದ ಸಾನಿಧ್ಯ ವಹಿಸಿದ ಪೂಜ್ಯರು, ಕುಂಬಾರ ಗುಂಡಯ್ಯನವರು 12ನೇ ಶತಮಾನದ ಬಸವ ಸಮಕಾಲೀನ ಮಹಾಶರಣರು ಆಗಿದ್ದರು. ಅವರ ವಾಸ್ತವ್ಯದಿಂದ ಪಾವನವಾಗಿರುವ ಭೂಮಿ ಭಾಲ್ಕಿಯಾಗಿದೆ. 12ನೇ ಶತಮಾನದಲ್ಲಿ ಗುಂಡಯ್ಯನವರು ಕಲ್ಯಾಣಕ್ಕೆ ಆಗಮಿಸಿ, ಬಸವಣ್ಣನವರು ಸ್ಥಾಪಿಸಿದ ಅನುಭವಮಂಟಪದಲ್ಲಿ ಭಾಗಿಯಾಗಿದ್ದರು. ಈ ಪರಂಪರೆಯನ್ನು ಮುಂದೆ ಪೂಜ್ಯ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ಮತ್ತು ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮುಂದುವರೆಸುತ್ತಾ ಬಂದಿದ್ದಾರೆ. ಬಸವಕಲ್ಯಾಣದಲ್ಲಿ ನಡೆಯುವ ಅನುಭವಮಂಟಪ ಉತ್ಸವಕ್ಕೆ ಭಾಲ್ಕಿಯಿಂದ ಕುಂಬಾರ ಗುಂಡಯ್ಯನವರ ಜ್ಯೋತಿ ಒಯ್ಯುವುದು ಅತ್ಯಂತ ಪುಣ್ಯದ ಕೆಲಸವಾಗಿದೆ. ಅದಕ್ಕಾಗಿ ಎಲ್ಲಾ ಬಸವಭಕ್ತರು ದಿ: 25-11-2022 ರಂದು ಮಧ್ಯಾಹ್ನ 12-00 ಗಂಟೆಗೆ ಈ ಜ್ಯೋತಿಯನ್ನು ಕುಂಭೇಶ್ವರ ದೇವಸ್ಥಾನದಿಂದ ತೆಗೆದುಕೊಂಡು ಬಸವಕಲ್ಯಾಣದ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಆಗಮಿಸಬೇಕು. ಅಲ್ಲಿ ಬೇರೆ ಬೇರೆ ಶರಣರ ಸ್ಥಳಗಳಿಂದ ಬರುವ ಎಲ್ಲಾ ಜ್ಯೋತಿಗಳಿಗೆ ಮತ್ತು ಮಹಾರಾಷ್ಟ್ರದ ಕರ್ನಾಟಕದಿಂದ ಪಾದಯಾತ್ರೆಯ ಮೂಲಕ ಆಗಮಿಸುತ್ತಿರುವ ಎಲ್ಲಾ ಬಸವಭಕ್ತರಿಗೆ ಸ್ವಾಗತವನ್ನು ಕೋರಲಾಗುವುದು ಎಂದು ನುಡಿದರು.

ಸಮಾರಂಭದಲ್ಲಿ ಭಾಲ್ಕಿಯ ಗಣ್ಯರಾದ ಶಿವು ಲೋಖಂಡೆ, ಶಶಿಧರ ಕೋಸಂಬೆ, ಜೈಹಿಂದ ಕುಂಬಾರ, ವಿಶಾಲ ಪುರಿ, ಬಸವರಾಜ ಮರೆ, ಮಲ್ಲಿಕಾರ್ಜುನ ಪಾವಡಶೆಟ್ಟೆ ಪ್ರೇಮಲಾ ತೊಂಡಾರೆ, ಲಕ್ಷ್ಮೀ ಸಂಗಮೆ, ಓಂಕಾರ ಶರಣರು ಉಪಸ್ಥಿತರಿದ್ದರು.