ಭಾರೀ ವಾಹನಗಳ ನಿಯಂತ್ರಣ-ಧೂಳು ಸ್ವಚ್ಛತೆಗೆ ಒತ್ತಾಯ

ಗದ್ವಾಲ್ ರಸ್ತೆ ವೀರಾಂಜಿನೇಯ್ಯ ದೇವಸ್ಥಾನ ಮುಂಭಾಗದ ನಿವಾಸಿಗಳಿಂದ ಮಿಂಚಿನ ಪ್ರತಿಭಟನೆ
ರಾಯಚೂರು.ನ.೨೫- ನಗರದ ಅತ್ಯಂತ ಕೆಟ್ಟ ರಸ್ತೆಗಳಲ್ಲಿ ಒಂದು ಎನಿಸಿಕೊಂಡ ಗದ್ವಾಲ್ ರಸ್ತೆ ಮೂಲಕ ಟಿಪ್ಪರ್ ಮತ್ತು ಲಾರಿಗಳು ವೀರಾಂಜಿನೇಯ್ಯ ಕಲ್ಯಾಣ ಮಂಟಪ ಹಾಗೂ ಸರ್ತಿಗೇರಿ ಮೂಲಕ ಹಾದು ಹೋಗುತ್ತಿದ್ದು, ಇದರಿಂದ ಆಕ್ರೋಶಗೊಂಡ ಇಲ್ಲಿಯ ಜನ ಈ ವಾಹನಗಳನ್ನು ನಿಯಂತ್ರಿಸುವಂತೆ ಆಗ್ರಹಿಸಿ ನಿನ್ನೆ ಅಲ್ಲಿಯ ಸ್ಥಳೀಯರು ಮಿಂಚಿನ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ಇತ್ತೀಚಿಗೆ ಭಾರೀ ಗಾತ್ರದ ವಾಹನಗಳು ಈ ರಸ್ತೆಯಲ್ಲಿ ಓಡಾಡುವುದು ತೀವ್ರಗೊಂಡಿದೆ. ಅನೇಕ ಸಲ ಅಪಘಾತಗಳು ಸಂಭವಿಸಿವೆ. ಲಾರಿ ಚಾಲಕರು ನಿರ್ಲಕ್ಷ್ಯ ಮತ್ತು ವೇಗದಿಂದ ವಾಹನಗಳನ್ನು ಓಡಿಸುತ್ತಿರುವ ಘಟನೆಯಿಂದ ಬೇಸತ್ತ ಜನ ನಿನ್ನೆ ಪ್ರತಿಭಟನೆಗಿಳಿದು ಇದನ್ನು ನಿಯಂತ್ರಿಸುವಂತೆ ಒತ್ತಾಯಿಸಿದರು. ವಾಹನಗಳ ಓಡಾಟದಿಂದಾಗಿ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ಭಾರೀ ಪ್ರಮಾಣದ ಧೂಳು ಇಲ್ಲಿಯ ನಿವಾಸಿಗಳಿಗೆ ಗಂಭೀರ ಸಮಸ್ಯೆಯಾಗಿ ಮಾರ್ಪಟ್ಟಿದೆ. ರಸ್ತೆ ಸ್ವಚ್ಛಗೊಳಿಸುವುದರೊಂದಿಗೆ ಭಾರೀ ವಾಹನಗಳನ್ನು ನಿಯಂತ್ರಿಸುವಂತೆ ಒತ್ತಾಯಿಸಿದರು.
ಕೆಲ ಸಮಯದವರೆಗೂ ವಾಹನಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ ಪರಿಸ್ಥಿತಿ ಗಂಭೀರಗೊಂಡಿತ್ತು. ಸ್ಥಳಕ್ಕೆ ಧಾವಿಸಿದ ನಗರಸಭೆ ಆಯುಕ್ತ ಕೆ.ಗುರುಲಿಂಗಪ್ಪ ಅವರು ಈ ಸಮಸ್ಯೆಯನ್ನು ಶೀಘ್ರವೇ ಪರಿಹರಿಸುವುದಾಗಿ ಸ್ಥಳೀಯರಿಗೆ ಭರವಸೆ ನೀಡಿದರು. ಕೆಲ ಸಮಯ ಆಯುಕ್ತರು ಮತ್ತು ಅಲ್ಲಿಯ ಸ್ಥಳೀಯ ನಿವಾಸಿಗಳ ಭಾರೀ ಮಾತಿನ ಚಕಮಕಿ ನಡೆಯಿತು. ಬಡಾವಣೆಯಲ್ಲಿ ದೂರಿನ ಸಮಸ್ಯೆ ಗಂಭೀರವಾಗಿದೆ. ಇದರಿಂದ ಅನೇಕ ರೋಗಗಳಿಗೆ ಗುರಿಯಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾರಣ ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೇ, ವಾಹನಗಳನ್ನು ಈ ರಸ್ತೆಯಲ್ಲಿ ಸಂಚರಿಸಲು ಸ್ಥಗಿತಗೊಳಿಸಲಾಗುತ್ತದೆಂದು ಎಚ್ಚರಿಸಿದರು. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ಅವರು ನೀಡಿದ ನಂತರ ಜನ ಅಲ್ಲಿಯ ನಿವಾಸಿಗಳು ಸಮಾಧಾನಗೊಂಡರು.