ಭಾರೀ ಮೌಲ್ಯದ ಚಿನ್ನಾಭರಣ ಕಳವು: ಆರೋಪಿಗಳ ಬಂಧನ

ಧರ್ಮಸ್ಥಳ, ಏ. ೧೦- ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಹಿಳೆಯೊಬ್ಬರ ಬ್ಯಾಗ್‌ನಿಂದ ಸುಮಾರು ೩.೨೦ ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಧರ್ಮಸ್ಥಳ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಗದಗ ಜಿಲ್ಲೆಯ ಅಸುಂಡಿ ಗ್ರಾಮದವರಾದ ಸಿದ್ದಾರ್ಥ(೨೬) ಹಾಗೂ ದ್ರಾಕ್ಷಾಯಿಣಿ ಕೊರಚರ (೨೬) ಎಂದು ಗುರುತಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಚಿಪಗಿ ಗ್ರಾಮ, ಶಿರಸಿ ತಾಲೂಕಿನ ಭವಾನಿ ಎಂಬುವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ್ದು, ದೇವರ ದರ್ಶನ ಮುಗಿಸಿ ಹೊರಗಡೆ ಬಂದಾಗ ಅವರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಸುಮಾರು ೪೦ ಗ್ರಾಂ ತೂಕದ ಚಿನ್ನದ ಸರ -೧ ಮತ್ತು ೪೦ ಗ್ರಾಂ ತೂಕದ ಚಿನ್ನದ ಬ್ರಾಸ್ ಲೈಟ್-೧ ಸೇರಿ ಒಟ್ಟು ಚಿನ್ನದ ತೂಕ ಸುಮಾರು ೮೫ ಗ್ರಾಂ ಮತ್ತು ಇದರ ಅಂದಾಜು ೩,೨೦,೦೦೦ ರೂ. ಮೌಲ್ಯದ ಚಿನ್ನವನ್ನು ಕದ್ದು ಪರಾರಿಯಾಗಿದ್ದರು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಋಷಿಕೇಶ್ ಸೋನವನೆ ಐ.ಪಿ.ಎಸ್ ರವರ ನಿರ್ದೇಶನದಂತೆ ಬಂಟ್ವಾಳ ಡಿ.ವೈಎಸ್.ಪಿ ವೆಲೈಂಟಿನ್ ಡಿ’ಸೋಜಾ ರವರ ಸೂಚನೆಯಂತೆ ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ಸಂದೇಶ್ ಪಿ.ಜಿ,ರವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಪೊಲೀಸ್ ಠಾಣಾ ಪಿ.ಎಸ್.ಐ ಪವನ್ ನಾಯಕ್ ಮತ್ತು ಸಿಬ್ಬಂದಿಗಳಾದ ಬೆನ್ನಿಚ್ಚನ್, ಪ್ರಶಾಂತ, ರಾಹುಲ್ ರಾವ್ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಇನ್ನು ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ ಕೆಎ. ೫೧ಎ. ೪೦೪೮ ನೇ ಇನ್ನೋವಾ ಕಾರು, ಹಾಗೂ ಕಳವಾದ ಒಟ್ಟು ೮೫ ಗ್ರಾಂ ಚಿನ್ನಾಭರಣಗಳನ್ನು ಸ್ವಾಧೀನಪಡಿಸಿಕೊಂಡು ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.