ಭಾರೀ ಮಳೆ : ಶಿವಮೊಗ್ಗದಲ್ಲಿ ನೂರಾರು ಮನೆಗಳಿಗೆ ನೀರು – ಆಡಳಿತದ ನಿರ್ಲಕ್ಷ್ಯ!


ಶಿವಮೊಗ್ಗ, ಸೆ. 7: ಭಾನುವಾರ ರಾತ್ರಿ ಶಿವಮೊಗ್ಗ ನಗರ ಹಾಗೂ ತಾಲೂಕಿನಲ್ಲಿ ಬಿದ್ದ ಧಾರಾಕಾರ ಮಳೆಗೆ, ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತ್ತು. ಕೆರೆ ಹಾಗೂ ರಾಜಕಾಲುವೆಗಳು ಉಕ್ಕಿ ಹರಿದ ಪರಿಣಾಮ ನೂರಾರು ಮನೆಗಳು, ಕೃಷಿ ಭೂಮಿ, ರಸ್ತೆಗಳು ಜಲಾವೃತವಾಗಿದ್ದವು. ಇದರಿಂದ ಜನಸಾಮಾನ್ಯರು ತೀವ್ರ ತೊಂದರೆ ಎದುರಿಸುವಂತಾಯಿತು.
ಜಾಗರಣೆ: ಅವ್ಯವಸ್ಥಿತ ರಾಜಕಾಲುವೆ ಹಾಗೂ ಚರಂಡಿಗಳಿಂದ, ಶಿವಮೊಗ್ಗ ನಗರದ ಹಲವು ಬಡಾವಣೆಗಳ ನಿವಾಸಿಗಳು ಮಳೆ ನೀರಿನಿಂದ ತೊಂದರೆಗೊಳಗಾಗುವಂತಾಯಿತು. ಮನೆಗಳಲ್ಲಿ ನುಗ್ಗಿದ ನೀರಿನಿಂದ ರಾತ್ರಿಯಿಡಿ ನಿದ್ರೆಯಿಲ್ಲದೆ ಜಾಗರಣೆ ಮಾಡುವಂತಾಯಿತು. ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕಿದರು.
ಹೊಸಮನೆ ಬಡಾವಣೆ 6 ನೇ ಮುಖ್ಯ ರಸ್ತೆಯಲ್ಲಿನ ಸುಮಾರು ಆರೇಳು ಕ್ರಾಸ್ ಗಳಲ್ಲಿನ ನೂರಾರು ಮನೆಗಳು ಜಲಾವೃತವಾಗಿದ್ದವು. ‘ಅವ್ಯವಸ್ಥಿತ ರಾಜಕಾಲುವೆ ಹಾಗೂ ಅಪೂರ್ಣ ಕಾಮಗಾರಿಯಿಂದ, ಮಳೆ ನೀರು ಮನೆಗಳಿಗೆ ನುಗ್ಗಿದೆ. ಕಳೆದ ಒಂದೂವರೆ ವರ್ಷದಿಂದ ರಾಜಕಾಲುವೆ ಕಾಮಗಾರಿ ನಡೆಸುವಂತೆ ಮನವಿ ಮಾಡಿದರೂ ಪಾಲಿಕೆ ಆಡಳಿತ ಯಾವುದೇ ಕ್ರಮಕೈಗೊಂಡಿಲ್ಲ.
ಸಂಪೂರ್ಣ ನಿರ್ಲಕ್ಷ್ಯವಹಿಸಿದೆ. ಇದರಿಂದ ನಾಗರೀಕರು ತೊಂದರೆ ಎದುರಿಸುವಂತಾಗಿದೆ. ಮನೆಗಳಿಗೆ ನೀರು ನುಗ್ಗಿದ್ದರಿಂದ ಕೆಲ ಮನೆಗಳಲ್ಲಿ ದಿನ ಬಳಕೆಯ ವಸ್ತುಗಳಿಗೆ ಹಾನಿಯಾಗಿದೆ. ಇಂತಹವರಿಗೆ ತಾಲೂಕು ಆಡಳಿತ ಸೂಕ್ತ ಪರಿಹಾರ ಕಲ್ಪಿಸಬೇಕು’ ಎಂದು ವಾರ್ಡ್ ಕಾರ್ಪೋರೇಟರ್ ರೇಖಾ ರಂಗನಾಥ್ ರವರು ಆಗ್ರಹಿಸಿದ್ದಾರೆ.
ಬಾಪೂಜಿನಗರ, ಟ್ಯಾಂಕ್ ಮೊಹಲ್ಲಾ, ಆರ್.ಎಂ.ಎಲ್. ನಗರ ಕಾಂಗ್ರೆಸ್ ಆಫೀಸ್ ಎದುರಿನ ರಸ್ತೆ, ಮಿಳಘಟ್ಟ ಮೊದಲಾದ ಪ್ರದೇಶಗಳಲ್ಲಿಯೂ ತಗ್ಗು ಪ್ರದೇಶಗಳು ಜಲಾವೃತವಾಗಿದ್ದವು. ಹಲವು ಮನೆಗಳಿಗೆ ನೀರು ನುಗ್ಗಿದ್ದ ವರದಿಗಳು ಬಂದಿವೆ. ಉಳಿದಂತೆ ನಗರದ ಹಲವೆಡೆ ಚರಂಡಿ, ರಾಜಕಾಲುವೆಗಳು ಉಕ್ಕಿ ಹರಿದು ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದವು.
ಆಡಳಿತದ ನಿರ್ಲಕ್ಷ್ಯ: ತಡರಾತ್ರಿ ತಾಲೂಕಿನ ಬಸವನಗಂಗೂರು ಗ್ರಾಮದ ಕೆರೆ ಕೋಡಿ ಬಿದ್ದು, ಉಕ್ಕಿ ಹರಿದ ಪರಿಣಾಮ ತಗ್ಗು ಪ್ರದೇಶದಲ್ಲಿರುವ ಕೆಹೆಚ್ಬಿ ಪ್ರೆಸ್ ಕಾಲೋನಿ, ಸರ್ಕಾರಿ ನೌಕರರ ಸಂಘದ ಲೇಔಟ್ ಜಲಾವೃತವಾಗಿತ್ತು. ತಾಲೂಕಿನ ಅತೀ ದೊಡ್ಡ ಕೆರೆಯಾದ ಸೋಮಿನಕೊಪ್ಪ ಕೆರೆಯಿಂದ ಭಾರೀ ಪ್ರಮಾಣದ ನೀರು ಹರಿಯುತ್ತಿದೆ. ಕೆರೆ ನೀರಿನಲ್ಲಿ ಹಲವು ಎಕರೆ ಕೃಷಿ ಭೂಮಿ ಜಲಾವೃತವಾಗಿದೆ.
ನಿರ್ಲಕ್ಷ್ಯ: ‘ಈ ಹಿಂದೆ ಲೇಔಟ್ ನಿರ್ಮಾಣದ ವೇಳೆ, ಕೆರೆ ಕೋಡಿ ಮುಚ್ಚಿ ಸಣ್ಣ ಚರಂಡಿ ಮಾಡಲಾಗಿದೆ. ಕೆರೆ ಕೋಡಿ ಬಿದ್ದ ವೇಳೆ ಚರಂಡಿಗಳಲ್ಲಿ ನೀರು ಉಕ್ಕಿ ಹರಿದು ಯುಜಿಡಿ ಗುಂಡಿ ಹಾಗೂ ಕುಡಿಯುವ ನೀರಿನ ಪೈಪ್ಗಳಲ್ಲಿ ಕೆರೆ ನೀರು ಹರಿಯುತ್ತಿದೆ. ರಸ್ತೆಗಳು ಜಲಾವೃತವಾಗುತ್ತಿವೆ.
ಈಗಾಗಲೇ ತಾಲೂಕು ಆಡಳಿತ, ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಹಾಗೂ ಕರ್ನಾಟಕ ಗೃಹ ಮಂಡಳಿ (ಕೆ.ಹೆಚ್.ಬಿ.) ಆಡಳಿತದ ಗಮನಕ್ಕೆ ತರಲಾಗಿದೆ. ಆದರೆ ಇಲ್ಲಿಯವರೆಗೂ ಯಾವುದೇ ಪರಿಹಾರ ಕ್ರಮ ಕೈಗೊಂಡಿಲ್ಲ. ಸಂಪೂರ್ಣ ನಿರ್ಲಕ್ಷ್ಯವಹಿಸಿದ್ದಾರೆ’ ಎಂದು ಕೆಹೆಚ್ಬಿ ಪ್ರೆಸ್ ಕಾಲೋನಿ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಕ್ಕಿ ಹರಿದ ಬಸವನಗಂಗೂರು ಕೆರೆ

  • ತಾಲೂಕಿನ ಬಸವನಗಂಗೂರು ಕೆರೆ ಉಕ್ಕಿ ಹರಿದ ಪರಿಣಾಮದಿಂದ ತಗ್ಗು ಪ್ರದೇಶದಲ್ಲಿರುವ ಕೆ.ಹೆಚ್.ಬಿ. ಪ್ರೆಸ್ ಕಾಲೋನಿ ಹಾಗೂ ಸರ್ಕಾರಿ ನೌಕರರ ಸಂಘದ ಲೇಔಟ್ ಜಲಾವೃತವಾಗಿತ್ತು. ಕೆಹೆಚ್ಬಿ ಪ್ರೆಸ್ ಕಾಲೋನಿಯಲ್ಲಿ ಕೆರೆ ಕಾಲುವೆ ಮುಚ್ಚಿ ಸಣ್ಣ ಚರಂಡಿ ನಿರ್ಮಿಸಲಾಗಿದೆ. ಇದರಿಂದ ಕೆರೆ ಕೋಡಿ ಬಿದ್ದ ವೇಳೆ, ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಯುಜಿಡಿ, ಕುಡಿಯುವ ನೀರಿನ ಪೈಪ್ಗಳಲ್ಲಿ ಮಳೆ ನೀರು ತುಂಬಿಕೊಳ್ಳುತ್ತಿದೆ. ಹಾಗೆಯೇ ಕೆರೆ ನೀರು ಹರಿದು ಹೋಗುವ ಕಾಲುವೆಯೂ ಕಿರಿದಾಗಿದ್ದು, ಹೂಳು ತುಂಬಿಕೊಂಡಿದೆ. ಅವ್ಯವಸ್ಥೆ ಸರಿಪಡಿಸುವಂತೆ ಸಣ್ಣ ನೀರಾವರಿ ಇಲಾಖೆ, ಕನರ್ಾಟಕ ಗೃಹ ಮಂಡಳಿ (ಕೆಹೆಚ್ಬಿ), ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಆಡಳಿತಕ್ಕೆ ಮನವಿ ಮಾಡಲಾಗಿದೆ. ಆದರೆ ಇಲ್ಲಿಯವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಸಂಪೂರ್ಣ ನಿರ್ಲಕ್ಷ್ಯವಹಿಸಿವೆ. ಇನ್ನಾದರೂ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್ರವರು ಸಮಸ್ಯೆ ಪರಿಹಾರದತ್ತ ಗಮನಹರಿಸಬೇಕು ಎಂದು ಕೆಹೆಚ್ಬಿ ಪ್ರೆಸ್ ಕಾಲೋನಿ ನಿವಾಸಿಗಳು ಆಗ್ರಹಿಸಿದ್ದಾರೆ.