ಭಾರೀ ಮಳೆಯಿಂದ ಬೆಳೆ ಹಾನಿ ; ಪರಿಹಾರಕ್ಕೆ ರೈತ ಸಂಘ ಒತ್ತಾಯ

ಕೋಲಾರ, ಆ.೪೦- ಕೋಲಾರ ರೈತರಿಗೆ ಉಚಿತವಾಗಿ ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಗಳ ವಿತರಣೆ ಶೀಘ್ರವಾಗಿ ಮಾಡಲು ಮತ್ತು ಅತಿಯಾದ ಮಳೆಯಿಂದ ಬಿತ್ತನೆ ಮಾಡಿರುವ ಜಮೀನುಗಳಿಗೆ ನೀರು ನುಗ್ಗಿ ಬಿತ್ತನೆ ಮಾಡಿರುವುದು ಹಾಳಾಗಿದ್ದು, ಟೊಮೊಟೊ ಹಾಲುಗಡ್ಡೆ ಬೆಳೆಗಳು ನೆಲಕಚ್ಚಿ ಹಾಳಾಗಿವೆ. ಆದರೆ ಉಸ್ತುವಾರಿ ಸಚಿವರು ಮಾತ್ರ ಕಾಣೆಯಾಗಿರುತ್ತಾರೆ. ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಿ ರೈತರಿಗೆ ಪರಿಹಾರ ನೀಡಲು ಒತ್ತಾಯಿಸಿ ಕರ್ನಾಟಕ ಮುಖ್ಯಮಂತ್ರಿಗಳಿಗೆ ಪ್ರೊ, ನಂಜುಂಡಸ್ವಾಮಿ ಸ್ಥಾಪಿತ. ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯು ತಹಶೀಲ್ದಾರ್ ನಾಗರಾಜ್ ಮುಖಾಂತರ ಮನವಿ ನೀಡಿ ಕೋರಿದ್ದಾರೆ.
ಪ್ರಸಕ್ತ ಸಾಲಿನಿಂದ ರಾಜ್ಯದ ರೈತರು ಆರ್ಥಿಕ ಸಂಕಷ್ಠದಲ್ಲಿದ್ದು, ರೈತರು ಬೆಳೆದಂತಹ ಬೆಳೆಗಳಿಗೆ ವೈಜ್ಞಾನಿಕ ಬೆಲೆಯಿಲ್ಲದೆ ಕಂಗಾಲಾಗಿದ್ದು, ಸುಮಾರು ಜನ ರೈತರು ಸಾಲದ ಶೂಲಕ್ಕೆ ಸಿಲುಕಿ ಆತ್ಮಹತ್ಯ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗುತ್ತಿವೆ. ಪ್ರತಿ ಸರ್ಕಾರವು ಕೂಡ ರೈತ ಪರ ಸರ್ಕಾರ ನಮ್ಮದು ಎಂದು ಹೇಳಿ ರೈತರ ಹೆಸರಿನಲ್ಲಿ ರೈತರಿಗೆ ಮೋಸ ಮಾಡುವುದನ್ನು ಇಡೀ ಕರ್ನಾಟಕದ ಜನ ಪ್ರತಿ ಬಾರಿಯೂ ನೋಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದಿದ್ದಾರೆ.
ಮುಂಗಾರು ಮಳೆ ರಾಜ್ಯದಲ್ಲಿ ಚುರುಕುಗೊಂಡಿದ್ದು, ಕೋಲಾರ ಜಿಲ್ಲೆಯಲ್ಲಿಯೂ ಸಹ ಇತ್ತೀಚೆಗೆ ಬಿದ್ದ ಮಳೆಯಿಂದ ಹಲವಾರು ಬೆಳೆಗಳು ನಷ್ಠವಾಗಿದ್ದು, ನಷ್ಠವಾಗಿರುವ ಬೆಳೆಗಳಿಗೆ ಸೂಕ್ತ ಪರಿಹಾರವನ್ನು ಕೂಡಲೇ ನಷ್ಟಹೊಂದಿರುವ ರೈತರಿಗೆ ಸರ್ಕಾರ ನೀಡಬೇಕು. ಹಾಗೂ ಬಿತ್ತನೆ ಕಾರ್ಯಗಳು ಚುರುಕುಗೊಂಡಿದ್ದು, ಬಿತ್ತನೆ ಆರಂಭಕ್ಕೆ ಮುಂಚೆ ಎಲ್ಲಾ ಹೋಬಳಿ ರೈತ ಸಂಪರ್ಕ ಕೇಂದ್ರಗಳಲ್ಲಿಯೂ ರೈತರಿಗೆ ಉಚಿತ ಬಿತ್ತನೆ ಬೀಜ, ಉಚಿತ ರಸಗೊಬ್ಬರ, ಕ್ರಿಮಿನಾಶಕಗಳು ನೀಡಲು ಸರ್ಕಾರ ಕ್ರಮ ವಹಿಸಿ ರೈತಪರ ಸರ್ಕಾರ ಎಂಬುವುದನ್ನು ಸಾಬೀತುಪಡಿಸಬೇಕು. ರೈತರು ಬೆಳೆದಂತಹ ಬೆಳೆಗಳಿಗೆ ಹಲವಾರು ಸಾಂಕ್ರಾಮಿಕ ರೋಗಗಳು ಬರುತ್ತಿದ್ದು, ಯಾವುದೇ ಔಷಧಿ ಸಿಂಪಡಿಸಿದರೂ ಸಹ ಆ ರೋಗವನ್ನು ತಡೆಯಲು ಸಾಧ್ಯವಾಗದೆ ರೈತರು ಕಂಗಾಲಾಗಿದ್ದಾರೆ. ಇದಕ್ಕೆ ಕಾರರ್ಯಾರು ಎಂಬುವುದನ್ನು ಪತ್ತೆಹಚ್ಚಬೇಕು. ರೈತರು ಬೆಳೆದಂತಹ ಬೆಳೆಗಳಿಗೆ ನಷ್ಠವಾಗದ ರೀತಿ ವೈಜ್ಞಾನಿಕ ಬೆಲೆಯನ್ನು ನಿಗದಿ ಮಾಡಿ ಗ್ರಾಹಕರಿಗೆ, ಮಾರಾಟಗಾರರಿಗೆ, ರೈತರಿಗೆ ಯಾರಿಗೂ ನಷ್ಠವಾಗದ ರೀತಿ ಅಥವಾ ಬೆಲೆ ಏರಿಕೆ ಬಿಸಿ ತಟ್ಟದ ರೀತಿ ಸರ್ಕಾರ ಬೆಲೆಯನ್ನು ನಿಗದಿ ಮಾಡಿ ಇಡೀ ರೈತ ಕುಲವನ್ನು ಕಾಪಾಡಲು ಸರ್ಕಾರ ಗಮನ ಹರಿಸಬೇಕೆಂದು ಒತ್ತಾಯಿಸಿದ್ದಾರೆ.
ಕಲ್ವಮಂಜಲಿ ರಾಮು ಶಿವಣ್ಣ, ಜಿಲ್ಲಾಧ್ಯಕ್ಷ ಕೊಲದೇವಿ ಗೋಪಾಲಕೃಷ್ಣಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ, ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ಲಕ್ಷ್ಮಿ ನಾರಾಯಣಶೆಟ್ಟಿ, ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ಧನರಾಜ್, ಶ್ರೀನಿವಾಸಪುರ ತಾಲ್ಲೂಕು ಅಧ್ಯಕ್ಷ ದೊಡ್ಡಕುರುಬರಹಳ್ಳಿ ಶಂಕರಪ್ಪ, ಕೋಲಾರ ತಾಲ್ಲೂಕು ಅಧ್ಯಕ್ಷ ಜಗನ್ನಾಥರೆಡ್ಡಿ, ಬಂಗಾರಪೇಟೆ ತಾಲ್ಲೂಕು ಅಧ್ಯಕ್ಷ ಕದಿರೇನಹಳ್ಳಿ ಶ್ರೀನಿವಾಸ್ ಉಪಸ್ಥಿತರಿದ್ದರು.