ಭಾರೀ ಮಳೆಗೆ ಮಾವು, ತರಕಾರಿ ಬೆಳೆ ನಾಶ

ಕೋಲಾರ,ಮೇ,೨೩- ಬಿರುಗಾಳಿ ಸಮೇತ ಆಲಿಕಲ್ಲು ಮಳೆಗೆ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಮಾವು ಫಸಲಿಗೆ ಬಾರಿ ನಷ್ಠವುಂಟಾದ ಕಾರಣ ಸೋಮವಾರ ಕಂದಾಯ ಹಾಗೂ ತೋಟಗಾರಿಗೆ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿದರು.
ತಾಲ್ಲೂಕಿನ ರೋಣೂರು ಮತ್ತು ಕಸಬಾ ಹೋಬಳಿಯ ಕೆಲ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಶೇ.೫೦ ರಷ್ಟು ಮಾವಿನ ಫಸಲು ನೆಲಕಚ್ಚಿದ್ದು ತಹಸೀಲ್ದಾರ್ ಶರೀನಾ ತಾಜ್, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಎಂ.ಶ್ರೀನಿವಾಸನ್ ನೇತೃತ್ವದಲ್ಲಿ ತಾಲ್ಲೂಕಿನ ಶೆಟ್ಟಿಹಳ್ಳಿ, ನಂಬಿಹಳ್ಳಿ ಸೇರಿದಂತೆ ಬಿರುಗಾಳಿ ಸಮೇತ ಆಲಿಕಲ್ಲು ಮಳೆ ಎಲ್ಲೆಲ್ಲಿ ಹೆಚ್ಚಾಗಿ ಬಿದ್ದಿದ್ದು ಬೆಳೆ ನಷ್ಠವಾಗಿದೆಯೊ ಆ ಗ್ರಾಮಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿದ್ದಾರೆ.
ಈ ಸಂಧರ್ಭದಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ರೈತರು ಬೆಳೆ ನಷ್ಠ ಸಂದರ್ಭದಲ್ಲಿ ಬಂದು ಸಮೀಕ್ಷೆ ಮಾಡಿ ಹೋಗುತ್ತೀರಿ, ನಂತರ ಕೇಳಿದರೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ ಎಂದು ಹೇಳತ್ತೀರಿ, ಕಳೆದ ವರ್ಷ ಮಳೆ ಕಾರಣದಿಂದ ಆಗಿರುವ ನಷ್ಠಕ್ಕೆ ಈವರೆಗೆ ಪರಿಹಾರ ನೀಡಿಲ್ಲ, ಬೆಳೆ ವಿಮೆ ಪಾವತಿಸಿ ಎಂದು ಹೆಳುತ್ತೀರಿ, ಬೆಳೆ ವಿಮೆಯ ಪರಿಹಾರ ಕೊಡಿಸಿ ಎಂದರೆ ಕಂಪನಿಗಳನ್ನು ಕೇಳಿ ಎನ್ನುತ್ತೀರಿ, ಏತಕ್ಕಾಗಿ ನೀವು ಸಮೀಕ್ಷೆ ಮಾಡಲು ಬರುತ್ತೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಅದಕ್ಕೆ ಉತ್ತರಿಸಿದ ಅಧಿಕಾರಿಗಳು ನಮ್ಮ ಕೆಲಸ ನಾವು ಮಾಡುತ್ತೇವೆ, ಕಳೆದ ವರ್ಷವೂ ನಷ್ಠದ ಬಗ್ಗೆ ಸರ್ಕಾರಕ್ಕೆ ವರದಿ ಕಳುಹಿಸಿದ್ದೇವೆ, ಭಾನುವಾರ ಮಳೆಯಿಂದಾಗಿರುವ ನಷ್ಠದ ಬಗ್ಗೆಯು ಸರ್ಕಾರಕ್ಕೆ ಮತ್ತು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸುತ್ತೇವೆ, ಪರಿಹಾರ ಕೊಡುವುದು ಬಿಡುವುದು ಸರ್ಕಾರಕ್ಕೆ ಬಿಟ್ಟಿದ್ದು ಎಂದು ನಷ್ಠ ಉಂಟಾಗಿರುವ ಎಲ್ಲಾ ಗ್ರಾಮಗಳ ತೋಟಗಳಿಗೆ ಭೇಟಿ ನೀಡಿ ಸಮೀಕ್ಷೆ ಮಾಡಿ ಬಂದಿದ್ದಾರೆ.
ಜಂಟಿ ಸಮೀಕ್ಷೆಯಿಂದ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಮಾವು ಸೇರಿದಂತೆ ವಿವಿಧ ತರಕಾರಿ ಬೆಳೆಗಳು ೨೯೦೦ ಹೆಕ್ಟೇರ್ ಪ್ರದೇಶದಲ್ಲಿ ನಷ್ಠ ಉಂಟಾಗಿರುವುದರ ಬಗ್ಗೆ ವರದಿ ತೋಟಗಾರಿಕೆ ಇಲಾಖೆಗೆ ರವಾನಿಸಿದ್ದಾರೆ ಎನ್ನಲಾಗಿದೆ, ಇದರಲ್ಲಿ ಶೇ.೮೦ ರಷ್ಟು ಮಾವು ಬೆಳೆ ನಷ್ಠ ಉಂಟಾಗಿದೆ ಎನ್ನಲಾಗಿದೆ.

ಸೋಮವಾರ ಸಂಜೆ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಷ್ಠ ಉಂಟಾಗಿರುವ ಬೆಳೆ ಬಗ್ಗೆ ವರದಿ ತಯಾರಿಸಿ ಜಿಲ್ಲಾ ತೋಟಗಾರಿಕೆಯ ನಿರ್ದೇಶಕರಿಗೆ ರವಾನಿಸಲಾಗಿದೆ. ಶೇ.೪೫ ರಿಂದ ೫೦ ರಷ್ಟು ಫಸಲು ತೋಟಗಳಲ್ಲಿ ಉದಿರಿ ಬಿದ್ದಿದೆ, ರೋಣೂರು ಮತ್ತು ಕಸಬಾ ಹೋಬಳಿಗಳಲ್ಲಿ ಮಾತ್ರ ಭಾನುವಾರ ಬಿದ್ದ ಬಿರುಗಳಿ ಸಮೇತ ಆಲಿಕಲ್ಲು ಮಳೆಗೆ ಫಸಲು ನಷ್ಠವಾಗಿದೆ.
-ಎಂ.ಶ್ರೀನಿವಾಸನ್, ತೋಟಗಾರಿಗೆ ಇಲಾಖೆ ಸಹಾಯಕ ನಿರ್ಧೇಶಕರು, ಶ್ರೀನಿವಾಸಪುರ