ಭಾರೀ ಮಳೆಗೆ ಮತ್ತೊಂದು ಬಲಿ

ಬೆಂಗಳೂರು, ಮೇ೨೪- ನಗರದಲ್ಲಿ ಸುರಿದಿರುವ ಭಾರೀ ಮಳೆಗೆ ಮತ್ತೊಂದು ಬಲಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಎರಡು ದಿನಗಳ ಹಿಂದೆ ಬಿದ್ದಿರುವ ಭಾರೀ ಮಳೆಗೆ ನೈಸ್ ರಸ್ತೆಯ ಕಾಚೋಹಳ್ಳಿಯ ಅಂಡರ್ ಪಾಸ್ ಬಳಿ ಫಕ್ರುದ್ದೀನ್ (೪೮)ಸಾವನ್ನಪ್ಪಿದ್ದಾರೆ.
ಕಳೆದ ಮೇ.೨೨ರಂದು ರಾತ್ರಿ ಕೆಲಸ ಮುಗಿಸಿಕೊಂಡು ರಾಮನಗರ ಕಡೆಗೆ ಬೈಕ್‌ನಲ್ಲಿ ಫಕ್ರುದ್ದೀನ್ ತೆರಳುತ್ತಿದ್ದಾಗ ಮಾರ್ಗ ಮಧ್ಯದ ಕಾಚೋಹಳ್ಳಿ ಅಂಡರ್ ಪಾಸ್ ಮೇಲಿನ ನೈಸ್ ರೋಡ್ ಮೇಲೆ ಸಂಚರಿಸುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ನೈಸ್ ರಸ್ತೆಯಲ್ಲಿ ಬಿದ್ದಿದ್ದರು.
ಗಾಯಗೊಂಡಿದ್ದ ಫ್ರಕ್ರುದ್ದೀನ್‌ನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಡಾ.ಸುಮನ್ ಪನ್ನೇಕರ್ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಮೇ.೨೧ರಂದು ನಗರದಲ್ಲಿ ಸುರಿದಿದ್ದ ಮಹಾಮಳೆಗೆ ಕೆಪಿ ಅಗ್ರಹಾರದ ಬಳಿ ಯುವಕನೊಬ್ಬ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ. ಕೆಆರ್ ಸರ್ಕಲ್ ಬಳಿಯ ಅಂಡರ್‌ಪಾಸ್‌ನಲ್ಲಿ ನಿಂತಿದ್ದ ಮಳೆ ನೀರಿನಲ್ಲಿ ಸಿಲುಕಿ ಇನ್ಫೋಸಿಸ್ ಉದ್ಯೋಗಿ ಯುವತಿಯೊಬ್ಬರ ಸಾವೂ ಆಗಿತ್ತು.