ಭಾರೀ ಬಿರುಗಾಳಿ ಮಳೆಗೆ ನೆಲಕಚ್ಚಿದ ಬಾಳೆ ಬೆಳೆ: ಲಕ್ಷಾಂತರ ರೂ. ನಷ್ಟ-ರೈತರ ಕಣ್ಣೀರು

ಸುತ್ತೂರು: ಮೇ.29:- ನಂಜನಗೂಡು ತಾಲ್ಲೂಕು ವರುಣಾ ವಿಧಾನ ಸಭಾ ಕ್ಷೇತ್ರಕ್ಕೆ ಸೇರುವ ತಾಯೂರು ಗ್ರಾ.ಪಂ ವ್ಯಾಪ್ತಿಯ ವಡ್ಡರಹುಂಡಿ ಗ್ರಾಮದಲ್ಲಿ ನಿನ್ನೆ ಸುರಿದ ಭಾರೀ ಬಿರುಗಾಳಿ ಸಹಿತ ಮಳೆಗೆ ಬಾಳೆ ಬೆಳೆ ಸಂಪೂರ್ಣ ನಾಶವಾಗಿದೆ
ವಡ್ಡರಹುಂಡಿ ಗ್ರಾಮದ ರಾಣಿ ಮತ್ತು ಪುಟ್ಟಸ್ವಾಮಿ ಎಂಬುವರಿಗೆ ಸೇರಿದ ಸರ್ವೇ ನಂಬರ್ 148/4 ರ ಜಮೀನಿನಲ್ಲಿ ತಲಾ ಒಂದೂವರೆ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ಬೆಳೆ ಭಾರೀ ಬಿರುಗಾಳಿ ಮಳೆಗೆ ಸಿಲುಕಿ ಸಂಪೂರ್ಣವಾಗಿ ನೆಲಕಚ್ಚಿದ್ದು, ಸುಮಾರು 2 ಲಕ್ಷ ರೂ. ಗೂ ಹೆಚ್ಚು ಖರ್ಚು ಮಾಡಿ ಬೆಳೆದಿದ್ದ ಸಾವಿರಾರು ಬಾಳೆ ಗಿಡಗಳು ಮುರಿದು ಬಿದ್ದಿವೆ. ಕಟಾವು ಮಾಡುವ ಹಂತದಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಸುಮಾರು ತಲಾ 7 ಲಕ್ಷ ರೂ. ನಷ್ಟವಾಗಿದ್ದು, ನಷ್ಟವಾಗಿರುವ ರೈತರುಗಳಿಗೆ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೂಡಲೇ ಸ್ಪಂದಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾ.ಪಂ ಸದಸ್ಯ ಸಾಲುಂಡಿ ಜಯಪ್ಪ ಹಾಗೂ ರೈತರುಗಳು ಒತ್ತಾಯ ಮಾಡಿದ್ದಾರೆ.