ಭಾರೀ ಗಾಳಿ-ಮಳೆ: ಧರೆಗುರುಳಿದ ವಿದ್ಯುತ್ ಕಂಬಗಳು: ಅಪಾರ ಹಾನಿ

ಬಂಟ್ವಾಳ, ಮಾ.೩೧- ಸೋಮವಾರ ರಾತ್ರಿ ಮಿಂಚು, ಸಿಡಿಲು, ಮಳೆ ಸಹಿತ ಬೀಸಿದ ಭಾರೀ ಗಾಳಿಗೆ ಬಂಟ್ವಾಳ ತಾಲೂಕಿನ ವಿವಿಧೆಡೆ ಮನೆಗಳಿಗೆ ಹಾನಿ ಉಂಟಾಗಿದ್ದು ಮರ, ವಿದ್ಯುತ್ ಕಂಬಗಳು ಧರೆಗುರುಳಿದೆ. ಈ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ ಉಂಟಾಗಿದೆ.
ಬಿ.ಮೂಡ ಗ್ರಾಮದ ಕಾಮಾಜೆ ಮತ್ತು ಮೈರನ್ ಪಾದೆಯಲ್ಲಿ ಎರಡು ಮನೆಗಳ ಮೇಲ್ಚಾವಣಿ ಗಾಳಿಗೆ ಸಂಪೂರ್ಣವಾಗಿ ಹಾರಿ ಹೋಗಿದೆ. ಅಲ್ಲದೆ ಈ ಭಾಗದಲ್ಲಿ ಮೂವತ್ತಕ್ಕೂ ಅಧಿಕ ಮನೆಗಳಿಗೆ ಸಾಧಾರಣ ಹಾನಿಯಾಗಿದೆ. ಗಾಳಿಗೆ ತಾಲೂಕಿನ ವಿವಿಧೆಡೆ ತೆಂಗು, ಮರಗಳು, ವಿದ್ಯುತ್ ಕಂಬಗಳು ಧರೆಗುಳಿದೆ. ವಿದ್ಯುತ್ ತಂತಿಗಳು ಕಡಿದಿರುವುದರಿಂದ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ರಾತ್ರಿಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ರಸ್ತೆಗೆ ಮರಗಳು ಉರುಳಿದ ಪರಿಣಾಮ ಕೆಲವೆಡೆ ರಸ್ತೆ ಸಂಚಾರ ಬಂದ್ ಆಗಿದ್ದವು. ಸ್ಥಳೀಯ ಯುವಕರು ಮರಗಳನ್ನು ತೆರವುಗೊಳಿಸಿದ ಬಗ್ಗೆಯೂ ವರದಿಯಾಗಿದೆ. ಅಲ್ಲದೆ ಮರ ಉರುಳಿ ಮನೆಗಳಿಗೆ ಹಾನಿಯಾದ ಬಗ್ಗೆಯೂ ವರದಿಯಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ನಷ್ಟದ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.