ಭಾರಿ ವಾಹನಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ.ಏ.08:ನಗರದ ಹೊರವಲಯಗಳಲ್ಲಿ ಭಾರಿ ವಾಹನಗಳು ಓಡಾಡುತ್ತಿದ್ದು, ಇವುಗಳಿಂದ ರಸ್ತೆ ಹಾಳಾಗುತ್ತಿದೆ. ಹೀಗಾಗಿ ಅಂತಹ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಿಯಿಂಗ್ ಹ್ಯುಮೆನ್ ಸಂಘಟನೆ ಪದಾಧಿಕಾರಿಗಳು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಮಾಡಿದರು.

ಪ್ರತಿಭಟನೆಕಾರರು ನಂತರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಆರ್‍ಟಿಒ ನಿಯಮಗಳನ್ನು ಉಲ್ಲಂಘಿಸಿ ಸಾಮಥ್ರ್ಯಕಿಂತ ಹೆಚ್ಚು ಭಾರ ಹೇರಿ ಸಾಗಣೆ ಮಾಡುತ್ತಿವೆ. ಈ ಬಗ್ಗೆ ಉಪ ಸಾರಿಗೆ ಇಲಾಖೆ ಅಧಿಕಾರಿಗಳು ಕಂಡು ಕಾಣದಂತೆ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ. ಹೆಚ್ಚು ಭಾರ ಹೇರಿ ಸಾಗಣೆ ಮಾಡುತ್ತಿರುವುದರಿಂದ ರಸ್ತೆಗಳು ಬೇಗ ಹಾಳಾಗುತ್ತಿವೆ. ನಗರದ ಹೊರ ವಲಯದಲ್ಲಿ ಆರ್‍ಟಿಒ ಅಧಿಕಾರಿಗಳು ಹಣ ವಸೂಲಿ ಮಾಡುತ್ತಿರುವ ಗುಮಾನಿಯೂ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ ಎಂದು ದೂರಿದರು.
ಕೂಡಲೇ ಈ ಕುರಿತು ಗಮನ ಹರಿಸಿ, ಅಕ್ರಮ ಹಣ ವಸೂಲಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಬೇಕು. ಮತ್ತು ಸಾಮಥ್ರ್ಯಕಿಂತ ಹೆಚ್ಚು ಭಾರ ಹೊತ್ತು ಸಾಗಣೆ ಮಾಡುವ ವಾಹನಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಸಂಬಂಧಿಸಿದ ಅಧಿಕಾರಿಗಳು ಒಂದು ವಾರದಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹಂತ ಹಂತವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಿಯಿಂಗ್ ಹ್ಯುಮೆನ್ ಸಂಘಟನೆ ಅಧ್ಯಕ್ಷ ಸಾದಿಕ್ ಅಲಿ ದೇಶಮುಖ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅಬ್ದುಲ್ ಕರೀಮ್, ಸೈಯದ್ ಅಹೆಮದ್, ಮಹಮದ್ ರಫೀಕ್, ಆಸಾದ್, ಇರ್ಶಾದ್ ಮುಂತಾದವರು ಪಾಲ್ಗೊಂಡಿದ್ದರು.