ಭಾರಿ ಮಳೆ, ಸಿಡಿಲ ಆರ್ಭಟಕ್ಕೆ 75 ಸಾವು

ಲಕ್ನೋ/ ಜೈಪುರ/ ಬೋಪಲ್, ಜು.೧೨- ಉತ್ತರ ಪ್ರದೇಶ ಮತ್ತು ರಾಜಸ್ತಾನ, ಮಧ್ಯ ಪ್ರದೇಶ ರಾಜ್ಯಗಳಲ್ಲಿ ಬಾರಿ ಮಳೆ,ಗುಡುಗು ಹಾಗು ಸಿಡಿಲಿಗೆ ಕನಿಷ್ಠ ೭೫ ಮಂದಿ ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ.
ಉತ್ತರ ಪ್ರದೇಶದ ೧೧ ಜಿಲ್ಲೆಗಳಲ್ಲಿ ಕನಿಷ್ಠ ೪೧ ಮಂದಿ ಹಾಗು ರಾಜಸ್ತಾನದ ಹಲವೆಡೆ ಸಿಡಿಲು ಬಡಿದು ೨೦, ಮಧ್ಯ ಪ್ರದೇಶದಲ್ಲಿ ೭ ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಮೃತಪಟ್ಟವರ ಪೈಕಿ ರಾಜಸ್ತಾನದಲ್ಲಿ ನಾಲ್ಕು ಮಕ್ಕಳು ಮತ್ತು ೧೨ ಕ್ಕೂ ಹೆಚ್ಚು ಮೇಕೆಗಳೂ ಸೇರಿವೆ.
ಸಿಡಿಲಿನ ಹೊಡೆತಕ್ಕೆ ಸಿಲುಕಿ ಮೃತಪಟ್ಟ ಕುಟುಂಬಗಳ ಸದಸ್ಯರಿಗೆ ಪ್ರಧಾನಿ ನರೇಂದ್ರ ಮೋದಿಯವರು ತೀವ್ರ ಸಂತಾಪ ಸೂಚಿಸಿದ್ದಾರೆ. ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಲಾ ೫ ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರವರು ಮೃತ ಹಾಗೂ ನೊಂದವರ ಕುಟುಂಟಕ್ಕೆ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಉತ್ತರಪ್ರದೇಶದಲ್ಲಿ ನೆನ್ನೆ ತಡರಾತ್ರಿಯ ಸುರಿದ ಭಾರಿ ಮಳೆ ಗುಡುಗು-ಸಿಡಿಲಿನಿಂದಾಗಿ ಪ್ರಯಾಗ್ರಾಜ್ ಜಿಲ್ಲೆಯಲ್ಲಿ ೧೪ ಮಂದಿ, ಕಾನ್ಪುರ ದೆಹತ್‌ನಲ್ಲಿ ೫ ಮಂದಿ,ಪಿರೋಜಾ ಬಾದ್, ಕೌಶಂಬಿಯಲ್ಲಿ ತಲಾ ೩ ಮಂದಿ, ಉನ್ನಾವೊ ಮತ್ತು ಚಿತ್ರಕೂಟ್ ನಲ್ಲಿ ತಲಾ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾನ್ಪುರ, ಪ್ರತಾಪ್ ಗಡ, ಆಗ್ರಾ,ವಾರಣಾಸಿ,ರಾಯ್ ಬರೇಲಿ,ಕೌಶಂಬಿಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದೆ.
ಮೃತಪಟ್ಟವರನ್ನು ರಕ್ಮಾ (೧೨), ಮೂರತ್ ದವಾಜ್ (೫೦),ರಾಮಚಂದ್ರ (೩೨), ಮಯಾಂಕ್ ಸಿಂಗ್ (೧೫) ಎಂದು ಗುರುತಿಸಲಾಗಿದೆ.
ಅಲ್ಲದೆ ಪಿರೋಜಾಬಾದ್ ನಲ್ಲಿ ಮರದ ಕೆಳಗೆ ನಿಂತಿದ್ದ ವೇಳೆ ಸಿಡಿಲು ಬಡಿದು ಹೇಮರಾಜ್ ( ೫೦), ರಾಮ್ ಸೇವಕ್ (೪೦), ಅಮರ್ ಸಿಂಗ್ ( ೬೦) ಮೃತಪಟ್ಟಿದ್ದಾರೆ.
ಇದೇ ರೀತಿಯ ಘಟನೆ ಗಾಜಿಪುರ್ ,ಬಲಿಯಾದಲ್ಲಿ ನಡೆದಿದ್ದು ಮಳೆಯಿಂದ ಮರದ ಕೆಳಗೆ ಆಶ್ರಯ ಪಡೆಯಲು ಹೋಗಿ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.
ಭಾರಿ ಮಳೆ ಗುಡುಗು ಸಿಡಿಲು ನಿಂದಾಗಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ಬೆಳೆ ಹಾನಿಯಾಗಿದೆ. ಅದರ ಅಂದಾಜು ಮಾಡಲಾಗುತ್ತಿದೆ ಎಂದು ಸರಕಾರದ ಉನ್ನತ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂಬಂಧಿಸಿದ ಜಿಲ್ಲಾಧಿಕಾರಿಗೆ ಅಗತ್ಯ ಪರಿಹಾರ ನೀಡುವಂತೆ ಸೂಚನೆ ನೀಡಿದ್ದಾರೆ
೨೨ ಕ್ಕೂ ಹೆಚ್ಚು ಮಂದಿ ಸಾವು
ರಾಜಸ್ತಾನದ ವಿವಿಧ ಭಾಗಗಗಳಲ್ಲಿ ಸುರಿಯುತ್ತಿರುವ ಬಾರಿ ಮಳೆ ಮತ್ತು ಸಿಡಿಲಿನ ಆರ್ಭಟಕ್ಕೆ ನಾಲ್ಕು ಮಕ್ಕಳು ಸೇರಿ ಕನಿಷ್ಠ ೨೦ ಮಂದಿ ಮೃತಪಟ್ಟಿದ್ದಾರೆ. ಐದು ಮಕ್ಕಳ ಸ್ಥಿತಿ ಗಂಬೀರವಾಗಿದೆ.
ಜೈಪುರದ ಜಯಗಢ ಕೋಟೆ, ನಹರ್‌ಗಢ ಕೋಟೆ ಹಾಗೂ ಅಮೀರ್ ಮಹಲ್‌ನಲ್ಲಿ ಮಳೆ ಮತ್ತು ಗುಡುಗು ಸಿಡಿಲು ಜನ್ನರನ್ನು ಬೆಚ್ಚಿಬೀಳಿಸಿದೆ.
ಅಮೀರ್ ಮಹಲ್‌ನ ವಾಚ್ ಟವರ್‌ಗೆ ಸಿಡಿಲು ಬಡಿದು ೧೬ ಮಂದಿ ಮೃತಪಟ್ಟಿದ್ದಾರೆ. ಮೇಕೆ ಮೇಯಿಸಲು ಹೋಗಿದ್ದ ೪ ಮಕ್ಕಳು ಮತ್ತು ೧೨ ಮೇಕೆಗಳು ಸಾವನ್ನಪ್ಪಿವೆ.
ವಾಚ್ ಟವರ್‌ನಲ್ಲಿ ಮೃತಪಟ್ಟ ೧೬ ಜನರ ಪೈಕಿ ಪಂಜಾಬ್ ಮೂಲದ ಅಣ್ಣ-ತಂಗಿಯೂ ಸೇರಿದದ್ದಾರೆ. ಅಮೃತ್‌ಸರ್ ನಿವಾಸಿಗಳಾದ ಅಮಿತ್ ಶರ್ಮಾ(೨೭), ಶಿವಾನಿ (೨೫) ಮೃತ ದುರ್ದೈವಿಗಳಾಗಿದ್ದಾರೆ. ಅಂಬರ್ ಅರಮನೆಯ ಮುಂಭಾಗದಲ್ಲಿರುವ ಬೆಟ್ಟದ ಮೇಲೇರಿದ್ದಾಗ, ಈ ಅವಘಡ ಸಂಭವಿಸಿದೆ.
ಕಾರ್ಯಾಚರಣೆ:
ವಾಚ್ ಟವರ್‌ನಲ್ಲಿ ಸುಮಾರು ೩೫ ರಿಂದ ೪೦ ಜನರಿದ್ದರು. ಇದ್ದಕ್ಕಿದ್ದಂತೆ ಬಡಿದ ಸಿಡಿಲಿಗೆ ೧೬ ಮಂದಿ ಬಲಿಯಾಗಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ನಾಗರಿಕ ರಕ್ಷಣಾ ಪಡೆ, ಎಸ್‌ಡಿಆರ್‌ಎಫ್ ಮತ್ತು ಪೊಲೀಸರ ತಂಡ ಇಡೀ ರಾತ್ರಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ.
ಹೆಚ್ಚುವರಿ ಪೊಲೀಸ್ ಆಯುಕ್ತ ರಾಹುಲ್ ಪ್ರಕಾಶ್ ಮಾತನಾಡಿ, ಈವರೆಗೆ ೧೧ ಜನರ ಮೃತದೇಹ ಹೊರ ತೆಗೆಯಲಾಗಿದೆ. ೧೫ ಮಂದಿ ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಮೂರು ಬಾರಿ ಈ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸಿದ್ದೇವೆ. ಬೆಳಗ್ಗೆ ಡ್ರೋನ್ ಮೂಲಕ ಶೋಧ ಕಾರ್ಯ ನಡೆಸಲಾಗುವುದು ಎಂದರು. ಮೃತರಲ್ಲಿ ಹೆಚ್ಚಿನವರು ಜೈಪುರ ಮೂಲದವರು ಎಂದು ತಿಳಿಸಿದ್ದಾರೆ.
ಸುಮಾರು ೩ ಸಾವಿರ ಮೆಟ್ಟಿಲುಗಳಿರುವ ವಾಚ್ ಟವರ್‌ನಲ್ಲಿ ಕಾರ್ಯಾಚರಣೆ ನಡೆಸುವುದು ರಕ್ಷಣಾ ಸಿಬ್ಬಂದಿಗೆ ಭಾರಿ ಕಷ್ಟದ ಕೆಲಸವಾಗಿದೆ. ಮೃತದೇಹಗಳನ್ನು ಕೆಳಗಿಳಿಸಲು ಸಿಬ್ಬಂದಿ ಭಾರಿ ಕಷ್ಟಪಡಬೇಕಾಯಿತು. ಮೃತರು ಮತ್ತು ಗಾಯಗೊಂಡವರನ್ನು ಹೆಗಲ ಮೇಲೆ ಹೊತ್ತು ಕೆಳಗಿಳಿಸಲಾಗಿದೆ ಎಂದು ಅವರು ತಿಳಿಸಿದರು.
ನಾಲ್ವರು ಮಕ್ಕಳು ಬಲಿ
ಜಿಲ್ಲೆಯ ತಹಸಿಲ್?ನ ಗಾರ್ಡಾ ಗ್ರಾಮದಲ್ಲಿ ಸಿಡಿಲಿಗೆ ಇಬ್ಬರು ಸಹೋದರರು ಸೇರಿದಂತೆ ನಾಲ್ವರು ಮಕ್ಕಳು ಮೃತಪಟ್ಟಿದ್ದು, ಐವರು ಮಕ್ಕಳ ಸ್ಥಿತಿ ಗಂಭೀರವಾಗಿದೆ.
೧೨ ಕ್ಕೂ ಹೆಚ್ಚು ಮೇಕೆಗಳು ಬಲಿಯಾಗಿವೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಮಕ್ಕಳು ಮೇಕೆ ಮೇಯಿಸಲು ತೆರಳಿದ್ದ ವೇಳೆ ಈ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರನ್ನು ವಿಕ್ರಂ (೧೬), ಅಕ್ರಜ್ (೧೩), ರಾಧೇಶ್ (೧೨), ಉರ್ಜನ್ (೧೬) ಎಂದು ಗುರುತಿಸಲಾಗಿದೆ.

ತಲಾ ೫ ಲಕ್ಷ ಪರಿಹಾರ
ರಾಜಸ್ತಾನದಲ್ಲಿ ಮಳೆ ಮತ್ತು ಸಿಡಿಲಿನಿಂದ ೨೦ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ದುರಂತಕ್ಕೆ ಮುಖ್ಯ ಮಂತ್ರಿ ಅಶೋಕ್ ಗೆಹ್ಲೋಟ್ ತೀವ್ರ ಸಂತಾಪ ಸೂಚಿಸಿದ್ದು ತಲಾ ೫ ಲಕ್ಷ ಪರಿಹಾರ ಪ್ರಕಟಿಸಿದ್ದಾರೆ.
ಅಲ್ಲದೆ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್, ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.