ಭಾರಿ ಮಳೆ: ಸಾವರರಿಗೆ ಪರ್ಯಾಯ ಮಾರ್ಗದಲ್ಲಿ ಚಲಿಸುವಂತೆ ಮನವಿ

ಕೆ.ಆರ್.ಪೇಟೆ: ಆ.04:- ಕಳೆದ ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಿಕ್ಕೇರಿ ಕೆರೆಯ ಪಕ್ಕದ ಅಡಿಕೆಕಟ್ಟೆ ಕೆರೆಯ ಏರಿ ಒಡೆದ ಪರಿಣಾಮ ಮೈಸೂರು ಚನ್ನರಾಯಪಟ್ಟಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಎಲ್ಲಾ ರೀತಿಯ ವಾಹನಗಳನ್ನು ಪರ್ಯಾಯ ಮಾರ್ಗದಲ್ಲಿ ಚಲಿಸುವಂತೆ ತಾಲ್ಲೂಕು ಆಡಳಿತ ಹಾಗೂ ಕೆಎಸ್‍ಆರ್‍ಟಿಸಿ ಡಿಪೋ ಮೇನೇಜರ್ ಮನವಿ ಮಾಡಿದ್ದಾರೆ.
ದೊಡ್ಡದಾದ ಅಡಿಕೆಕಟ್ಟೆ ಕೆರೆ ಮಳೆಯ ನೀರನ್ನು ತಡೆಯಲಾಗದೇ ಮಂಗಳವಾರ ರಾತ್ರಿ ಒಡೆದುಹೋದ ಪರಿಣಾಮ ಬೃಹತ್ ಪ್ರಮಾಣದ ಕೆರೆಯನೀರು ಹಾಗೂ ಕಿಕ್ಕೇರಿ ಕೆರೆಯ ಕೋಡಿ ನೀರು ಎರಡೂ ಸೇರಿ ಹರಿಯುತ್ತಿರುವ ಕಾರಣ ಹೆದ್ದಾರಿಯಲ್ಲಿ ಯಾವುದೇ ವಾಹನಗಳು ಸಂಚರಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆರೆಯ ನೀರು ಹೆಚ್ಚಾಗಿ ಹರಿಯುತ್ತಿರುವ ಕಾರಣ ಸೊಳ್ಳೆಪುರ ಗ್ರಾಮಕ್ಕೆ ಸಂಪರ್ಕ ಕಡಿತವಾಗಿದ್ದು ಕಿಕ್ಕೇರಿ ಮುಖ್ಯ ರಸ್ತೆಯಲ್ಲಿರುವ ಪೆಟ್ರೋಲ್‍ಬಂಕ್ ಸಹ ನೀರಿನಲ್ಲಿ ಆವೃತವಾಗಿದೆ. ಅಪಾರ ಪ್ರಮಾಣದ ಬೆಳೆಹಾನಿ ಉಂಟಾಗಿದೆ.
ಅಡಿಕೆಕಟ್ಟೆ ಕೆರೆಯ ಸಮೀಪದಲ್ಲಿ ಪ್ರಕಾಶ್ ಮತ್ತು ರಾಮಕೃಷ್ಣೇಗೌಡ ಎಂಬ ಎರಡು ಮನೆಗಳು ಸಂಪೂರ್ಣವಾಗಿ ಜಲಾವೃತವಾಗಿರುವುದನ್ನು ತಿಳಿಸಿದ ಗ್ರಾಮಸ್ಥರು ಕೂಡಲೇ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಶಿವಣ್ಣ ನೇತೃತ್ವದ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಮನೆಯ ಮೇಲ್ಬಾಗ ನಿಂತಿದ್ದ ಹತ್ತು ಮಂದಿಯನ್ನು ಹಾಗೂ ಪೆಟ್ರೋಲ್‍ಬಂಕ್‍ನಲ್ಲಿ ಇದ್ದ ಐವರನ್ನು ಹಾಗೂ ಎಂಟು ಜಾನುವಾರುಗಳನ್ನು ಒಬಿಎಂ ಬೋಟ್ ಮೂಲಕ ರಕ್ಷಣೆ ಮಾಡಿದ್ದಾರೆ. ಸುಮಾರು 5-6 ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ ಅಗ್ನಿಶಾಂಕರಾದ ಚಂದ್ರಶೇಖರ್, ಹರೀಶ್, ದಿನೇಶ್, ಸುಭಾಷ್, ಸಂತೋಷ್ ಕುಮಾರ್, ಚಾಲಕ ಸಚ್ಚಿನ್‍ಕರದಿನ್, ಮಂಜುನಾಥ್, ಶ್ರೀಕಾಂತ್, ಸಿದ್ದಲಿಂಗಸ್ವಾಮಿ, ಅಭಿಲಾಷ್, ಚಂದನ್‍ಕುಮಾರ್, ಪ್ರಮೋದ್, ರಿಜ್ವಾನ್, ಸ್ವಾಮಿ ಸೇರಿದಂತೆ ಹಲವರು ಹಲವರ ಪ್ರಾಣ ರಕ್ಷಣೆ ಮಾಡಿದ್ದಾರೆ.