ಭಾರಿ ಮಳೆ- ಸಂಚಾರ ಸ್ಥಗಿತ

ಲಕ್ಷ್ಮೇಶ್ವರ, ಆ 3: ತಾಲೂಕಿನಾದ್ಯಂತ ಸುರಿದ ಭಾರಿ ಮಳೆಗೆ ರಸ್ತೆಗಳ ಮೇಲೆ ನೀರು ಹರಿದು ಸಂಚಾರ ಸ್ಥಗಿತಗೊಂಡಿತು.
ತಾಲೂಕಿನ ಲಕ್ಷ್ಮೇಶ್ವರ ಬೆಳ್ಳಟ್ಟಿ ಮಧ್ಯದ ನೆಲುಗಲ್ ಸಮೀಪ ಭಾರೀ ಮಳೆಯಿಂದಾಗಿ ಹಳ್ಳಕ್ಕೆ ಪ್ರವಾಹ ಬಂದು ರಸ್ತೆಯ ಮೇಲೆ ನೀರು ಹರಿದಿದ್ದರಿಂದ ಕೆಲ ಕಾಲ ರಸ್ತೆ ಸಂಚಾರ ಬಂದ್ ಆಗಿ, ಸಾರ್ವಜನಿಕರು ಪ್ರವಾಹದ ನೀರು ತೆಗೆಯುವವರೆಗೂ ವಾಹನ ಸಂಚಾರ ಸ್ಥಗಿತವಾಗಿತ್ತು.
ಸುದ್ದಿ ತಿಳಿಯುತ್ತಿದ್ದಂತೆ ತಹಶೀಲ್ದಾರ್ ಪರುಶುರಾಮ ಸತ್ತಿಗೇರಿ ಅವರು ಗ್ರಾಮಕ್ಕೆ ತೆರಳಿ ಜನರಿಗೆ ಎಚ್ಚರಿಕೆ ನೀಡಿ ಪ್ರವಾಹದ ನೀರು ತಗ್ಗು ವವರೆಗೂ ನೀರಿನಲ್ಲಿ ಇಳಿಯದಂತೆ ಸೂಚಿಸಿದರು. ಅನವಶ್ಯಕವಾಗಿ ಯಾವುದೇ ದು:ಸ್ಸಾಹಸ ಮಾಡದೆ ಪ್ರಾಣ ಹಾನಿ ಆಗದಂತೆ ಮುಂಜಾಗ್ರತೆ ವಹಿಸಬೇಕೆಂದು ಜನರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಬಿಎಂ ಕಾತ್ರಾಳ ಮತ್ತು ಗ್ರಾಮ ಲೆಕ್ಕಾಧಿಕಾರಿ ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.