ಭಾರಿ ಮಳೆಗೆ ಅಪಾರ ಮೌಲ್ಯದ ಬೆಳೆಹಾನಿ


ಸಂಜೆವಾಣಿ ವಾರ್ತೆ
ಹೊಸಪೇಟೆ ಆ3: ಭಾರಿ ಮಳೆಗೆ ತಾಲ್ಲೂಕಿನ ಧರ್ಮಸಾಗರ ಗ್ರಾಮದಲ್ಲಿ ರೈತರು ಬೆಳೆದು ನಿಂತ ಲಕ್ಷಾಂತರ ರೂ. ಬೆಲೆಬಾಳುವ ಹತ್ತಿ ಬೆಳೆಗೆ ಹಾನಿ ಉಂಟಾಗಿದೆ.
ಸಾಲಸೂಲ ಮಾಡಿ ಹತ್ತಿ ಬೆಳೆಯನ್ನು ಬೆಳೆದಿದ್ದ ರೈತರಿಗೆ ಧಾರಾಕಾರ ಮಳೆಯ ಪರಿಣಾಮದಿಂದ ಬೆಳೆದು ನಿಂತ ಹತ್ತಿ ಬೆಳೆ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಹತ್ತಿ ಬೆಳೆ ಕೈಗೆ ಬರುವ ಮುನ್ನವೇ ಮಳೆ ಹೊಡೆತಕ್ಕೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಲಕ್ಷಾಂತರ ರೂಗಳನ್ನು ವ್ಯಯಿಸಿ ಗ್ರಾಮದ ಅರ್ಧಕ್ಕೂ ಹೆಚ್ಚು ರೈತರು ಹತ್ತಿ ಬೆಳೆಯನ್ನು ಬೆಳೆದು, ಲಾಭದ ನಿರೀಕ್ಷೆಯಲ್ಲಿದ್ದರು. ಲಾಭ ಬರುವುದು ಇರಲಿ ಸಾಲ ಮಾಡಿ ಖರ್ಚು ಮಾಡಿದ ಹಣ ಕೂಡ ಬರದಂತಾಗಿದ್ದು, ರೈತರು ಸಾಲದ ಶೂಲಕ್ಕೆ ಸಿಲುಕುವಂತಾಗಿದೆ.
ಕಳೆದ ವರ್ಷ ಸುರಿದ ಮಳೆಗೆ ಗ್ರಾಮದಲ್ಲಿ ರೈತರು ಬೆಳೆದ ಕೆಂಪು ಮಣಶಿನಕಾಯಿ ನೀರಿಗೆ ಆಹುತಿಯಾಗಿತ್ತು. ಲಕ್ಷಾಂತರ ರೂ ಹಾನಿ ಸಂಭವಿಸಿ, ರೈತರು ಚಿಂತೆಗೀಡಾಗಿದ್ದರು. ಈ ಬಾರಿ ಸಹ ಹತ್ತಿ ಬೆಳೆದ ರೈತರಿಗೆ ಕಳೆದ ಪರಿಸ್ಥಿತಿ ಎದುರಾಗಿ, ಆತಂಕದಲ್ಲಿ ಮುಳಗಿದ್ದರು. ಕಳೆದ ವರ್ಷ ಹಾನಿಯಾದ ಕೆಂಪು ಮೆಣಶಿನಕಾಯಿಗೆ ಪರಿಹಾರ ಕೊಡುಸುವಲ್ಲಿ ಜಿಲ್ಲಾಡಳಿತ ವಿಳಂಬ ಮಾಡಿತ್ತು. ಈ ಬಾರಿಯಾದರೂ ಹಾನಿಗೊಳಾದ ಹತ್ತಿ ಬೆಳಗಾರರಿಗೆ ಶೀಘ್ರ ಪರಿಹಾರ ವಿತರಣೆಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಆಗ್ರಹವಾಗಿದೆ. 
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಅನಿರುದ್ದ ಶ್ರವಣ್ ಕಳೆದ ಮೂರುನಾಲ್ಕ ದಿನಗಳಿಂದ ಸುರಿದ ಮಳೆ ಅನೇಕ ಜನ ಜಾನುವಾರು, ಬೆಳೆ ಹಾಗೂ ಆಸ್ತಿ ಹಾನಿಗೆ ಕಾರಣವಾಗಿರಬಹುದು ನಿಖರ ಮಾಹಿತಿ ಇಲ್ಲವಾಗಿದ್ದ ಗ್ರಾಮ ಲೆಕ್ಕಿಗರು ಸೇರಿದಂತೆ ತಹಶೀಲ್ದಾರರ ಮೂಲಕ ಮಾಹಿತಿ ಕಲೆಹಾಕುವ ಕೆಲಸ ಪ್ರಗತಿಯಲ್ಲಿದ್ದು ನಿಖರ ಮಾಹಿತಿಯನ್ನು ಸರ್ಕಾರಕ್ಕೆ ಕಳುಹಿಸಿ ಅಗತ್ಯ ನೆರವು ನೀಡಲು ಮುಂದಾಗಲಿದ್ದೇವೆ ಎಂದರು.