ಭಾರಿ ಬೆಂಕಿ ಅವಘಡ ಆತಂಕ ಸೃಷ್ಠಿ

ಬೆಂಗಳೂರು,ನ.೧೦-ಹೊಸ ಗುಡ್ಡದಹಳ್ಳಿಯ ಬಾಪೂಜಿ ನಗರದಲ್ಲಿ ಇಂದು ಮಧ್ಯಾಹ್ನ ರಸಾಯನಿಕ ವಸ್ತುಗಳನ್ನು ತುಂಬಿದ್ದ ಕಾರ್ಖಾನೆಯಲ್ಲಿ ಬೃಹತ್ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು.
ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡ ಬೆಂಕಿಯು ವ್ಯಾಪಕವಾಗಿ ಕ್ಷಣಾರ್ಧದಲ್ಲಿ ಹರಡಿ ಆತಂಕ ಸೃಷ್ಟಿಯಾದ ಬೆನ್ನಲ್ಲೇ ಅಕ್ಕಪಕ್ಕದ ಮನೆಯವರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಈ ಬೆಂಕಿ ಅವಘಡದಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಬಾಪೂಜಿ ನಗರದ ಮಹದೇವ ಸ್ಕೂಲ್ ಬಳಿಯಿರುವ ರಸಾಯನಿಕ ವಸ್ತುಗಳನ್ನು ತುಂಬಿದ ಕಾರ್ಖಾನೆಯಲ್ಲಿ ಬೆಳಿಗ್ಗೆ ೧೧.೩೦ರ ವೇಳೆ ಕಾಣಿಸಿಕೊಂಡ ಬೆಂಕಿ ಸ್ವಲ್ಪ ಹೊತ್ತಿನಲ್ಲಿ ಇಡೀ ಕಾರ್ಖಾನೆಯನ್ನು ಆವರಿಸಿದೆ.
ಕಾರ್ಖಾನೆಯಲ್ಲಿದ್ದ ನಾಲ್ವರು ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದು ಅಕ್ಕಪಕ್ಕದ ವರು ಸುರಕ್ಷಿತ ಸ್ಥಳದತ್ತ ಓಡಿದ್ದಾರೆ. ಬೆಂಕಿಯು ಬೃಹತ್ ಪ್ರಮಾಣದಲ್ಲಿ ಹರಡಿ ಅಕ್ಕಪಕ್ಕದ ಮನೆಗಳಿಗೆ ಆವರಿಸ ತೊಡಗಿದೆ.
ಸುದ್ದಿ ತಿಳಿದ ತಕ್ಷಣವೇ ಒಂದರಿಂದ ಒಂದರಂತೆ ೮ ಅಗ್ನಿಶಾಮಕ ವಾಹನಗಳು ಧಾವಿಸಿ ಕಾರ್ಯಾಚರಣೆ ಕೈಗೊಂಡು ಬೆಂಕಿ ನಿಯಂತ್ರಣಕ್ಕೆ ಹರಸಾಹಸ ಪಡಲಾಯಿತು.
ಬೃಹತ್ ಪ್ರಮಾಣದಲ್ಲಿ ಬೆಂಕಿಯು ಅಕ್ಕ ಪಕ್ಕದ ಮನೆಗಳಿಗೆ ವ್ಯಾಪಿಸುತ್ತಿರುವುದರಿಂದ ಅಕ್ಕಪಕ್ಕದ ಮನೆಯವರನ್ನು ಸ್ಥಳಾಂತರಿಸಿರುವ ಪೊಲೀಸರು ಮತ್ತು ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯತ್ತ ಯಾರೊಬ್ಬರೂ ಸುಳಿಯದಂತೆ ಭದ್ರತೆ ಕೈಗೊಂಡಿದ್ದಾರೆ.
ಇಡೀ ರಸ್ತೆಯಲ್ಲಾ ಎಲ್ಲಿ ನೋಡಿದರೂ ಬೆಂಕಿಮಯವಾಗಿದ್ದು, ಸಂಪೂರ್ಣ ಹೊಗೆ ಆವರಿಸಿಕೊಂಡಿದ್ದು ರಾಸಾಯನಿಕ ವಸ್ತುಗಳು ತುಂಬಿದ್ದರಿಂದ ಬೆಂಕಿಯು ಬೃಹತ್ ಪ್ರಮಾಣದಲ್ಲಿ ಹರಡಿದೆ.
ಬೆಂಕಿಯಿಂದ ಫ್ಯಾಕ್ಟರಿ ಅಕ್ಕ ಪಕ್ಕ ನಿಲ್ಲಿಸಿದ್ದ ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಅಗ್ನಿಶಾಮಕದಳ ಸಿಬ್ಬಂದಿ ಮತ್ತು ಬ್ಯಾಟರಾಯನಪುರ ಪೊಲೀಸರು ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಡಿಸಿಪಿ ಡಾ.ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಬೆಂಕಿಯಿಂದ ಯಾವುದೇ ರೀತಿಯ ಸಾವು ನೋವು ಸಂಭವಿಸಿಲ್ಲ ಆದರೆ ಕೋಟ್ಯಾಂತರ ರೂಗಳ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.