
ಯಾದಗಿರಿ : ಸೆ.05: ಸೋಮವಾರ ಮದ್ಯಾಹ್ನ ಸುರಿದ ಭಾರಿ ಮಳೆಗೆ ನಗರದ ಹೊಸಳ್ಳಿ ಕ್ರಾಸ್ ಬಳಿ ಇರುವ ನೀರು ಶುದ್ಧಿಕರಣ ಘಟಕದ ಕಂಪೌಂಡ್ ಕುಸಿದು ಬಿದ್ದ ಪರಿಣಾಮ ನ್ಯೂ ಬಾಂಬೆ ಗ್ಯಾರೇಜ್ ಮುಂಭಾಗದಲ್ಲಿ ನಿಲ್ಲಿಸಿದ್ದ ಮೂರು ಕಾರುಗಳು ಜಖಂ ಗೊಂಡಿದ್ದು ಇದಕ್ಕೆ ಪರಿಹಾರ ನೀಡುವಂತೆ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಆಗ್ರಹಿಸಿದ್ದಾರೆ.
ಈ ಕುರಿತು ಘಟನೆ ನಡೆದ ಹಿನ್ನೆಲೆಯಲ್ಲಿ ಗ್ಯಾರೇಜ್ ಮಾಲೀಕರ ಮತ್ತು ಮೆಕ್ಯಾನಿಕ್ ಸಂಘದ ಪದಾಧಿಕಾರಿಗಳು ನನ್ನ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಮೊದಲೇ ಕಂಪೌಂಡ್ ಶಿಥಿಲಗೊಂಡಿತ್ತು. ಈದೀಗ ಮಳೆಗೆ ಕಂಪೌಂಡ್ ಬಿದ್ದ ಪರಿಣಾಮ ಕಾರುಗಳು ಜಖಂ ಗೊಂಡು ಭಾರಿ ನಷ್ಟವಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಮುಂಜಾಗೃತಾ ಕ್ರಮ ವಹಿಸಿ ದುರಸ್ತಿ ಮಾಡಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾರುಗಳು ಜಖಂಗೊಂಡಿದ್ದು ಇದಕ್ಕೆ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.
ಮದ್ಯಾಹ್ನ ಊಟದ ಸಮಯಕ್ಕೆ ಮೆಕ್ಯಾನಿಕ್ ಗಳು ಸಹ ಊಟಕ್ಕೆ ತೆರಳಿದ್ದರಿಂದ ಸಾವುನೋವು ಆಗಿಲ್ಲ. ಆದ್ದರಿಂದ ವಾಹನಗಳಿಗೆ ಮಾತ್ರ ಭಾರಿ ನಷ್ಟವಾಗಿದ್ದು ಇದನ್ನು ನಗರಸಭೆಯವರು ಭರಿಸಿಕೊಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಇದಲ್ಲದೇ ನೀರು ಶುದ್ಧಿಕರಣ ಘಟಕದ ಆವರಣಗೋಡೆ ಪೂರ್ತಿ ನೆಲಸಮಗೊಳಿಸಿ ಹೊಸದಾಗಿ ನಿರ್ಮಾಣ ಮಾಡಬೇಕು ಇಲ್ಲದಿದ್ದರೆ ವಿದ್ಯುತ್ ಕಂಬಗಳು ಪಕ್ಕದಲ್ಲೇ ಇದ್ದು ಅವುಗಳ ಮೇಲೆ ಗೋಡೆ ಬಿದ್ದು ಭಾರಿ ಅನಾಹುತ ಸಂಭವಿಸುವ ಸಾಧ್ಯತೆ ಇದೆ.
ಇದೆಲ್ಲವನ್ನು ಮನಗಂಡು ನಗರಸಭೆ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಅವ್ಯವಸ್ಥೆ ಸರಿಪಡಿಸಬೇಕು ಮತ್ತು ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಇಲ್ಲವಾದಲ್ಲಿ ನೀರು ಶುಧ್ಧಿಕರಣ ಘಟಕದ ಎದುರಿಗೆ ಇರುವ ರಸ್ತೆ ತಡೆದು ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮೆಕ್ಯಾನಿಕ್ ಸಂಘದ ಅಧ್ಯಕ್ಷ ಶರಣಪ್ಪ ಕೌಳೂರು, ಬಾಂಬೆ ಗ್ಯಾರೇಜ್ ಮಾಲಿಕ ರಸೂಲ್ ಸಾಬ, ಮಹಮ್ಮದ್ ಗೌಸ್, ಆಂಜಿನೇಯ ನಾಯ್ಕೊಡಿ ಬೆಳಗೇರಾ, ಆನಂದ, ಭೀಮಣ್ಣ ವಾಡಿ, ಬನ್ನಪ್ಪ, ಮಹಮ್ಮದ್ ಷಬ್ಬೀರ್, ಖದೀರ್, ಕರೀಮ್ ಇನ್ನಿತರರಿದ್ದರು.