ಭಾರತ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದೆ: ಶಾಸಕ ಪಾಟೀಲ್

ಅಫಜಲಪುರ: ಆ.15:ನೂರಾ ಮೂವತ್ತು ಕೋಟಿಗೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ನಮ್ಮ ಭಾರತ ದೇಶ ವಿಶ್ವದ ಜಾಗತಿಕ ಮಟ್ಟದಲ್ಲಿ ಬೆಳೆದು ನಿಂತಿದೆ ಎಂದು ಶಾಸಕ ಎಂ.ವೈ ಪಾಟೀಲ್ ತಿಳಿಸಿದರು.

ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಹಿಂದೆ ಗುಲಾಮಗಿರಿಯಲ್ಲಿದ್ದ ನಮ್ಮ ದೇಶ ಹೇಳಿಕೊಳ್ಳುವಷ್ಟು ಅಭಿವೃದ್ಧಿ ಹೊಂದಿರಲಿಲ್ಲ. ಆದರೆ ನಮ್ಮ ಹಿರಿಯರ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಶಾಂತಿ ಮತ್ತು ಕ್ರಾಂತಿಯ ಬಲಿದಾನದಿಂದ ನಮಗೆ ಸ್ವತಂತ್ರ ದೊರಕಿತು. ನಮ್ಮ ದೇಶ ಅಭಿವೃದ್ಧಿ ಹೊಂದಿದೆ ಆದರೆ ಜಾತೀಯತೆ, ಮಹಿಳೆಯರ ಮೇಲಿನ ದೌರ್ಜನ್ಯ, ಬಡತನ, ಶಿಕ್ಷಣ ಮುಂತಾದ ಸಮಸ್ಯೆಗಳು ನಮ್ಮನ್ನು ಇನ್ನೂ ಕಾಡುತ್ತಿವೆ. ನಾವು ಇಲ್ಲಿವರೆಗೂ ಶೇ. 65% ಪ್ರತಿಶತ ಮಾತ್ರ ಸಾಧನೆ ಮಾಡಿದ್ದೇವೆ. ವೈವಿಧ್ಯತೆಯಲ್ಲಿ ಏಕತೆ ಹೊಂದಿದ ನಮ್ಮ ದೇಶದಲ್ಲಿ ನಾವು ಒಂದಾಗಿ ಇಂದಿಗೆ 77 ವರ್ಷ ಗತಿಸಿದವು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ನಮ್ಮೆಲ್ಲರಿಗೂ ಒಂದುಗೂಡಿಸಿದೆ. ನಮ್ಮನ್ನು ಯಾರಿಂದಲೂ ದೂರ ಮಾಡಲು ಸಾಧ್ಯವಿಲ್ಲ. ಹೀಗಾಗಿ ಈ ದೇಶದ ಭಾವಿ ಪ್ರಜೆಗಳಾಗಿರುವ ಇಂದಿನ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದ್ದು ಒಳ್ಳೆಯ ಶಿಕ್ಷಣವಂತರಾಗಿ ದೇಶಕ್ಕೆ ಕೀರ್ತಿ ತರುವ ಹೆಮ್ಮೆಯ ಮಕ್ಕಳಾಗಿ ಬೆಳೆಯಿರಿ ಎಂದು ಸಲಹೆ ನೀಡಿದರು.

ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಸಂಜೀವಕುಮಾರ ದಾಸರ ಮಾತನಾಡಿ, ಶತ ಶತಮಾನಗಳ ಕಾಲ ನಮ್ಮನ್ನಾಳಿದ ಬ್ರಿಟೀಷರ ವಿರುದ್ಧ ನಮ್ಮ ಪೂರ್ವಿಕರ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳ ಸಂಕೇತವೇ ಇಂದಿನ ಸ್ವಾತಂತ್ರ್ಯ ದಿನಾಚರಣೆ. ಜಾಗತೀಕರಣ ಮಟ್ಟದಲ್ಲಿ ಇಂದು ಭಾರತ ದೇಶ ವಿಶ್ವದಲ್ಲಿ ಗುರುತಿಸಿಕೊಂಡಿದೆ. ಹೀಗಾಗಿ ಈ ರಾಷ್ಟ್ರದ ಸವಾರ್ಂಗೀಣ ಅಭಿವೃದ್ಧಿಗಾಗಿ ನಾವೆಲ್ಲರೂ ಸಶಕ್ತ ಭಾರತ ನಿರ್ಮಾಣಕ್ಕೆ ಮುಂದಾಗೋಣ ಎಂದು ರಾಷ್ಟ್ರ ಧ್ವಜಾರೋಹಣ ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ನಂತರ ಉತ್ತಮ ಪ್ರದರ್ಶನ ನೀಡಿದ ಮಕ್ಕಳಿಗೆ ಹಾಗೂ 2022-23 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ತಾ.ಪಂ ಇಓ ರಮೇಶ ಸುಲ್ಫಿ, ಸಿಪಿಐ ಪಂಡಿತ ಸಗರ್, ಪುರಸಭೆ ಮುಖ್ಯಾಧಿಕಾರಿ ವಿಜಯಮಹಾಂತೇಶ, ತಾಲೂಕಾ ಕೃಷಿ ಅಧಿಕಾರಿ ಎಸ್.ಎಚ್ ಗಡಗಿಮನಿ, ಕ.ಸ.ನೌ.ಸಂ ತಾಲೂಕು ಅಧ್ಯಕ್ಷ ರಾಜಕುಮಾರ ಗುಣಾರಿ, ಲೋಕೋಪಯೋಗಿ ಅಧಿಕಾರಿ ಉಮೇಶ ಆಲೇಗಾಂವ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಶಿಕ್ಷಕ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.