ಭಾರತ ವಿಶ್ವಗುರು ಆಗುವದರಲ್ಲಿ ಯಾವುದೇ ಸಂದೇಹವಿಲ್ಲ:ಇಸ್ರೋ ವಿಜ್ಞಾನಿ ಅಭಿಷೇಕ

(ಸಂಜೆವಾಣಿ ವಾರ್ತೆ)
ವಿಜಯಪುರ:ಸೆ.15: ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಇಟ್ಟುಕೊಂಡು ಶ್ರದ್ದೆಯಿಂದ ಸತತ ಪ್ರಯತ್ನಪಟ್ಟರೆ ಯಶಸ್ಸು ಕಟ್ಟಿಟ್ಟ ಬುತ್ತಿ. ನೀವು ಕಾಣುವ ಕನಸು ದೊಡ್ಡದಿರಲಿ ಗುರುವಿನ ಮಾರ್ಗದರ್ಶನ ಅವಶ್ಯ. ನನ್ನಂತಹ ಯುವ ವಿಜ್ಞಾನಿಗಳ ಸೃಷ್ಠಿಸುವಲ್ಲಿ ಗುರುಗಳ ಪಾತ್ರ ಅನನ್ಯ. ಇಸ್ರೋದಲ್ಲಿ ಅನೇಕ ವಿಜ್ಞಾನಿಗಳ ಪ್ರಯತ್ನದ ಫಲವಾಗಿ ಚಂದ್ರಯಾನ-3 ಯಶಸ್ವಿಯಿಂದ ವಿಶ್ವವೇ ಭಾರತದತ್ತ ನೋಡುತ್ತಿದೆ. ಕೆಲವೇ ದಿನಗಳಲ್ಲಿ ಭಾರತವು ವಿಶ್ವಗುರು ಆಗುವದರಲ್ಲಿ ಯಾವುದೇ ಸಂದೇಹವಿಲ್ಲ ಆ ದಿನ ಸನಿಹದಲ್ಲಿದೆ ಎಂದು ಚಂದ್ರಯಾನ-3 ಯಶಸ್ವಿ ತಂಡದ ಸದಸ್ಯ, ಇಸ್ರೋ ಯುವ ವಿಜ್ಞಾನಿ ವಿಜಯಪುರದ ಅಭಿಷೇಕ ಅರವಿಂದ ದೇಶಪಾಂಡೆ ಹೇಳಿದರು.
ನಗರದ ಬಿಡಿಇ ಸಂಸ್ಥೆಯ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಿಳಾ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿನಿಯರ ಬೀಳ್ಕೋಡುಗೆ ಹಾಗೂ 2022-23ನೇ ಸಾಲಿನ ಸಾಂಸ್ಕøತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು ನಮ್ಮ ಬಗ್ಗೆ ನಮಗೆ ಕೀಳರಿಮೆ, ಹಿಂಜರಿಕೆ ಬೇಡ. ನಿಮಗಾಗಿ ನಿಮ್ಮ ತಂದೆ-ತಾಯಿಗಳ ಕಷ್ಟ ಪರಿಶ್ರಮವನ್ನು ಗಮನದಲ್ಲಿಟ್ಟುಕೊಂಡು ಕಷ್ಟಪಟ್ಟು ಏನನ್ನಾದರೂ ಸಾಧಿಸಿ ಅವರು ಕನಸು ಈಡೇರಿಸಿ ಇಸ್ರೋದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳು ಇವೆ. ಕೇವಲ ತಾಂತ್ರಿಕ ಪದವೀಧರರಷ್ಟೇ ಅಲ್ಲದೆ ಕಲಾ, ವಾಣಿಜ್ಯ, ಪದವಿ ವಿದ್ಯಾರ್ಥಿಗಳು ಅಲ್ಲಿಯ ಬೇರೆ ಬೇರೆ ವಿಭಾಗಗಳಲ್ಲಿ ಉದ್ಯೋಗ ಪಡೆಯಬಹುದು. ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಿ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶಾಂತವೀರ ಪದವಿಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಡಾ. ಎಸ್.ಎಸ್. ಪಾಟೀಲ ವಿದ್ಯಾರ್ಥಿಗಳು ಕೇವಲ ವಿಷಯಗಳನ್ನು ಅಧ್ಯಯನ ಮಾಡದೆ ಅವುಗಳ ಜೊತೆಗೆ ಜೀವನ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರಲ್ಲೂ ಒಂದಿಲ್ಲೊಂದು ವಿಶೇಷತೆ ಇರುತ್ತದೆ. ನಿಮ್ಮಲ್ಲಿರುವ ಸೂಪ್ತ ಶಕ್ತಿಯನ್ನು ಹೊರಗೆ ತನ್ನಿ ಮತ್ತೊಬ್ಬರಿಗೆ ಗೌರವ ನೀಡುವ ವಿಶಾಲಭಾವ ಹೊಂದಬೇಕು. ಮೊಬೈಲ್ ಹಾವಳಿಯ ಮಧ್ಯದಲ್ಲೂ ಅವುಗಳನ್ನು ಧನಾತ್ಮಕವಾಗಿ ಉಪಯೋಗಿಸಿದರೆ. ಅದರಿಂದ ವಿಶ್ವಜ್ಞಾನ ಪಡೆಯಲು ಸಾಧ್ಯ. ನಮ್ಮಲ್ಲಿ ದೃಢತೆ, ಛಲ, ಆತ್ಮವಿಶ್ವಾಸ ಇದ್ದರೆ ನಾವು ಇಟ್ಟುಕೊಂಡ ಗುರಿ ಖಂಡಿತಾ ಈಡೇರುತ್ತದೆ ಎಂದರು.
ಬಿಡಿಇ ಸಂಸ್ಥೆಯ ಅಧ್ಯಕ್ಷೆ ಕೆ.ಬಿ. ಕುಲಕರ್ಣಿ (ಮಮದಾಪೂರ) ಮಾತನಾಡಿ, ಜನ್ಮದಾತೆ, ಜನ್ಮಭೂಮಿ ಮರೆಯಲಾರದಂತಹವು ತಂದೆ-ತಾಯಿಗಳಿಗೆ ಮಕ್ಕಳೆ ಆಸ್ತಿ. ಇಸ್ರೋದ ಚಂದ್ರಯಾನ-3 ಯಶಸ್ವಿಯಲ್ಲಿ ಕಾರ್ಯನಿರ್ವಹಿಸಿದ ಅಭಿಷೇಕ ವಿಜಯಪುರ ಜಿಲ್ಲೆಯ ಹೆಸರನ್ನು ವಿಶ್ವಮಟ್ಟಕ್ಕೆ ಪರಿಚಯಿಸಿರುವುದು ದೊಡ್ಡ ಸಾಧನೆ. ಈ ಸಂಸ್ಥೆಯಲ್ಲಿ ಶಿಕ್ಷಣದ ಜೊತೆ ಸಂಸ್ಕಾರವನ್ನು ನೀಡುತ್ತಿರುವುದು ವಿಶೇಷವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ರಾಷ್ಟ್ರ, ರಾಜ್ಯ ಮತ್ತು ಅಂತರಮಹಾವಿದ್ಯಾಲಯಗಳ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಹಾಗೂ ಸಾಂಸ್ಕøತಿಕ ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ವಿಜಯಪುರದ ಇಸ್ರೋ ವಿಜ್ಞಾನಿ ಅಭಿಷೇಕ ದೇಶಪಾಂಡೆ ಅವರನ್ನು ಸಾರ್ವಜನಿಕರ ಪರವಾಗಿ ಸನ್ಮಾನಿಸಲಾಯಿತು.
ಬಿಡಿಇ ಸಂಸ್ಥೆಯ ಉಪಾಧ್ಯಕ್ಷ ಪ್ರೊ. ಎ.ಡಿ. ದೇಶಪಾಂಡೆ, ಜಂಟಿ ಕಾರ್ಯದರ್ಶಿ ಆರ್.ಪಿ. ಚಿಕ್ಕಲಕಿ, ನಿರ್ದೇಶಕ ಡಾ. ಮುಕುಂದ ಗಲಗಲಿ, ಪ್ರೊ. ಪಿ.ಟಿ. ಕೊಟ್ನಿಸ್ ವೇದಿಕೆ ಮೇಲಿದ್ದರು. ಜ್ಯೋತಿ ಆಲೂರ ಸಾಂಸ್ಕøತಿಕ ಪಾರಿತೋಷಕವನ್ನು, ಪ್ರೊ. ಎಸ್.ಪಿ. ಚಲವಾದಿ ಕ್ರೀಡಾ ಪಾರಿತೋಷಕ ವಿತರಣೆಯನ್ನು ನಡೆಸಿಕೊಟ್ಟರು.
ಕುಮಾರಿ ನಿಕೀತಾ ಬಿಲಾನಾ ಪ್ರಾರ್ಥಿಸಿದರು. ಪ್ರಾಚಾರ್ಯ ಪ್ರೊ. ಜಿ.ಎನ್. ದೇಶಪಾಂಡೆ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸೀಮಾ ಹೊನವಾಡ ವಾರ್ಷಿಕ ವರದಿ ವಾಚಿಸಿದರು. ಪ್ರೊ. ಆರ್.ಎಸ್. ದೀಕ್ಷಿತ ಹಾಗೂ ಡಾ. ಎಸ್.ಎಸ್. ಪಾಟೀಲ ನಿರೂಪಿಸಿದರು. ಕುಮಾರಿ ಸ್ವಾತಿ ತೇಲಸಂಗ ವಂದಿಸಿದರು.
ಕಾರ್ಯಕ್ರಮದಲ್ಲಿ ಕೆ.ಪಿ. ಜಹಾಗೀರದಾರ, ಸಂತೋಷ ಕುಲಕರ್ಣಿ, ಎಂ.ಎ. ತಿಳಗುಳಕರ, ಎಸ್.ಎಂ. ಕೊರ್ತಿ, ಪಿ.ಬಿ. ಜೋಶಿ, ಶೈಲಜಾ ಪಾಟೀಲ, ಅಶ್ವಿನಿ ಹಿರೇಕುರಬರ, ವಾಣಿಶ್ರೀ ಹತ್ತಿ, ತಸ್ಲೀಮಾ ಶೇರಪಾದೆ, ಜಿ.ಜಿ. ಗಾಡಗಿಲ, ಕೆ.ವಿ. ಕುಲಕರ್ಣಿ, ಪಿ.ಬಿ. ಸಾಂಗ್ಲೀಕರ, ಸುನಂದಾ ಪವಾರ, ಹಾಗೂ ವಿದ್ಯಾರ್ಥಿಗಳು-ಪಾಲಕರು ಉಪಸ್ಥಿತರಿದ್ದರು.