ಭಾರತ ವಿಶ್ವಗುರುವಾಗಲು ಸಂಸ್ಕøತಿ, ಪರಂಪರೆ, ಆಧ್ಯಾತ್ಮಿಕತೆ ಕಾರಣ: ಕೇಂದ್ರ ಸಚಿವ ಖೂಬಾ

(ಸಂಜೆವಾಣಿ ವಾರ್ತೆ)
ಅಫಜಲಪುರ :ಮಾ.11: ಭಾರತವು ವಿಶ್ವಗುರುವಾಗಲು ದೇಶದ ಸಂಸ್ಕೃತಿ, ಪರಂಪರೆ ಹಾಗೂ ಆಧ್ಯಾತ್ಮಿಕತೆ ಕಾರಣ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಮೂಲಗಳು, ರಾಸಾಯನಿಕ ಮತ್ತು ರಸಗೊಬ್ಬರಗಳ ಖಾತೆ ರಾಜ್ಯ ಸಚಿವ ಭಗವಂತ್ ಖೂಬಾ ಅವರು ಹೇಳಿದರು.
ಶುಕ್ರವಾರ ಪಟ್ಟಣದ ಸಂಸ್ಥಾನ ಹಿರೇಮಠದಿಂದ ಕಟ್ಟಿದ ಶ್ರೀ ಗುರು ಮಳೇಂದ್ರ ಶಿವಾಚಾರ್ಯ ಕಲ್ಯಾಣ ಮಂಟಪದ ಉದ್ಘಾಟನಾ ಸಮಾರಂಭದ ಧರ್ಮ ಸಭೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ದೇಶ ಮಠಮಾನ್ಯಗಳ, ಸಾಧು, ಸಂತರ, ಯೋಗಿಗಳ ದೇಶವಾಗಿದೆ. ಇಂತಹ ದೇಶದ ಪರಂಪರೆಯನ್ನು, ಸಂಸ್ಕೃತಿಯನ್ನು ಇಡೀ ವಿಶ್ವದಲ್ಲಿಯೇ ನೋಡಿದರೂ ಸಿಗುವುದಿಲ್ಲ. ಇಂತಹ ದೇಶದಲ್ಲಿ ಜನ್ಮ ತಾಳಿದ ನಾವು ಭಾಗ್ಯವಂತರು ಎಂದರು.
ಕರ್ನಾಟಕದಲ್ಲಿ ಮಠ, ಮಾನ್ಯಗಳ ಕಾರ್ಯವನ್ನು, ಸಮಾಜಕ್ಕೆ ಮಾರ್ಗದರ್ಶನ ಹಾಗೂ ಆಶೀರ್ವಾದವನ್ನು, ವಿಶ್ವದಲ್ಲಿಯೇ ಪ್ರಜಾಪ್ರಭುತ್ವ, ಸಮಾಜವನ್ನು ಹಿಡಿದಿಡುವ ಸ್ಥಾನದಲ್ಲಿ ಮಠ ಮಾನ್ಯಗಳ ವ್ಯವಸ್ಥೆ ಸಮಾಜಕ್ಕೆ ಸದಾ ಮಾರ್ಗದರ್ಶನ ಹಾಗೂ ಆಶೀರ್ವಾದ ನೀಡುತ್ತಿವೆ. ಜಾತಿ ಪದ್ದತಿಯನ್ನು ತೊಡೆದು ಹಾಕಿ, ಮೇಲು, ಕೀಳು ಭಾವನೆಯನ್ನು ತೊಡೆದು ಹಾಕಿ, ಸಹೋದರತ್ವ ಭಾವನೆಯನ್ನು ಹುಟ್ಟುಹಾಕಿ, ಎಲ್ಲರನ್ನೂ ಸನ್ಮಾರ್ಗಕ್ಕೆ ಕೊಂಡೊಯ್ದ ಕೀರ್ತಿ ಮಠ, ಮಾನ್ಯರಿಗೆ, ಸಾಧು, ಸಂತರಿಗೆ ಸಲ್ಲುತ್ತದೆ ಎಂದು ಅವರು ಹೇಳಿದರು.
ಸಮಾಜದಲ್ಲಿ, ವ್ಯಕ್ತಿಗೆ ಮಠಾಧೀಶರ ಆಶೀರ್ವಾದದ ಸಾನಿಧ್ಯದಲ್ಲಿ ನಾವು ನಿರಂತರವಾಗಿ ನಮ್ಮ ಕೆಟ್ಟ ಬುದ್ದಿಗಳನ್ನು ತಡೆಹಿಡಿದು ಸನ್ಮಾರ್ಗದಲ್ಲಿ ಮುನ್ನಡೆದು ಆನಂದದ ಕ್ಷಣಗಳನ್ನು ಹೆಚ್ಚಿಸುತ್ತ, ಒಳ್ಳೆಯ ನಾಗರಿಕರಾಗಿ, ಸಮಾಜ ಕಟ್ಟುವಲ್ಲಿ, ದೇಶ ಕಟ್ಟುವಲ್ಲಿ ನಮ್ಮದೇ ಆದ ವಿಶೇಷ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತ, ಭಾರತ ವಿಶ್ವಗುರು ಆಗುತ್ತಿದೆ. ಅದಕ್ಕೆ ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಇಡೀ ವಿಶ್ವಕ್ಕೆ ಮಾರ್ಗದರ್ಶನ ಮಾಡಿದ ಕೀರ್ತಿ ಹೋಗುತ್ತದೆ ಎಂದು ಅವರು ತಿಳಿಸಿದರು.
ಅದ್ಭುತ ಕಲ್ಯಾಣ ಮಂಟಪ ಲೋಕಾರ್ಪಣೆ. 96ಗ್ರಾಮಗಳಿಗೆ ಭೇಟಿ ನೀಡಿ, ದುರ್ಗುಣಗಳನ್ನು, ದುಶ್ಚಟಗಳನ್ನು ಜೋಳಿಗೆಗೆ ಹಾಕಿ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದಾರೆ. ಜೀವನವನ್ನು ಸಂಪೂರ್ಣ ಸಮಾಜಕ್ಕೆ ಸಮರ್ಪಣೆ ಮಾಡಿದ್ದಾರೆ. ಸಾವಿರಾರು ಜನರು ಸ್ಪಂದಿಸಿದ್ದಾರೆ. ನಮ್ಮ ಪರಂಪರೆ, ಸಂಸ್ಕೃತಿಗೆ ಸದಾ ಮಾರ್ಗದರ್ಶನ ಮಾಡಿದ್ದಾರೆ ಎಂದು ಅವರು ಹೇಳಿದರು.
ದಿವ್ಯ ಸಾನಿಧ್ಯವನ್ನು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ್ ಜಗದ್ಗುರುಗಳು, ನೇತೃತ್ವವನ್ನು ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು, ಅಧ್ಯಕ್ಷತೆಯನ್ನು ಸೋಲಾಪುರ ಲೋಕಸಭಾ ಸದಸ್ಯ ಗೌಡಗಾಂವ್ ಡಾ. ಜಯಸಿದ್ಧೇಶ್ವರ್ ಶಿವಾಚಾರ್ಯರು ವಹಿಸಿದ್ದರು. ಆಲಮೇಲ್ ಚಂದ್ರಶೇಖರ್ ಶಿವಾಚಾರ್ಯರು, ಗುಳೇದಗುಡ್ಡ ವಿರಕ್ತ ಮಠದ ಒಪ್ಪತ್ತೇಶ್ವರ್ ಸ್ವಾಮಿಗಳು, ಚಿಣಮಗೇರಿ, ಶ್ರೀನಿವಾಸ್ ಸರಡಗಿ, ಸ್ಟೇಶನ್ ಬಬಲಾದ್, ನಾದ್, ಬಸವಕಲ್ಯಾಣ, ಮಾಶಾಳ ಶ್ರೀಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಶಾಸಕರಾದ ಎಂ.ವೈ. ಪಾಟೀಲ್, ರಮೇಶ್ ಭೂಸನೂರ್, ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಮೊದಲ್ಗೊಂಡು ಹಲವಾರು ರಾಜಕೀಯ ಧುರೀಣರು ಹಾಗೂ ಗಣ್ಯರು ಉಪಸ್ಥಿತರಿದ್ದರು.