ಭಾರತ ವಿವಿಧತೆಯಲ್ಲಿ ಏಕತೆ ಕಾಣುವ ದೇಶ -ಇಂದಿರಾ ಕೃಷ್ಣಪ್ಪ

ವಿಜಯಪುರ.ನ೨೦_ಈ ಭೂಮಿ ಪ್ರತಿಯೊಬ್ಬ ಮಾನವನ ಅಗತ್ಯಗಳನ್ನು ಪೂರೈಸುವಷ್ಟು ಸಂಪನ್ಮೂಲಗಳನ್ನು ಒದಗಿಸುತ್ತದೆ. ಆದಾಗ್ಯೂ ಮನುಷ್ಯನ ಆಸೆ. ದುರಾಸೆಗಳಿಗೆ ಬಲಿಯಾಗಿ, ನೆಮ್ಮದಿಯಿಂದ ದೂರಾಗುತ್ತಿದ್ದಾನೆ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ ತಿಳಿಸಿದರು.
ಪಟ್ಟಣದ ಸುದರ್ಶನ್ ಮ್ಯಾಚಿಂಗ್ ಸೆಂಟರ್ ಆವರಣದಲ್ಲಿ ಗುರುವಾರದಂದು ಆಯೋಜಿಸಲಾಗಿದ್ದ ಭಾರತ ಸರಕಾರದ ಯುವ ಜನ ಸೇವೆ ಮತ್ತು ಕ್ರೀಡಾ ಸಚಿವಾಲಯ, ಬೆಂ.ಗ್ರಾ.ಜಿಲ್ಲಾ ನೆಹರು ಯುವ ಕೇಂದ್ರ, ಬೆಂಗಳೂರು ಗಾಂಧಿ ಭವನದ ಗಾಂಧಿ ಸ್ಮಾರಕ ನಿಧಿ, ಕೆನರಾ ಬ್ಯಾಂಕ್ ಆಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಭಾವೈಕ್ಯತೆ ದಿನಾಚರಣೆ “ಕ್ವಾಮಿ ಏಕ್ತಾ ದಿವಸ್ ಹಾಗೂ ಕೆನರಾ ಬ್ಯಾಂಕ್ ನ ೧೧೫ನೇ ವರ್ಷದ ಸಂಸ್ಥಾಪನಾ ದಿನಾಚರಣೆ, ಇಂದಿರಾ ಗಾಂಧಿ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಭಾರತ ದೇಶದಲ್ಲಿ ಸಾವಿರಾರು ವರ್ಷಗಳಿಂದ ದಾಸ್ಯ, ಅಸ್ಪೃಶ್ಯತೆ, ಮೇಲು, ಕೀಳು, ಜಾತಿ ಪದ್ಧತಿಗಳು ಅಂದಿನಿಂದ ಇಂದಿನ ತನಕ ಆಚರಣೆಗೊಂಡು ಬಂದಿದ್ದು, ಈ ಪದ್ಧತಿಯ ನಿರ್ಮೂಲನೆಗಾಗಿ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿರವರು ಸಾಕಷ್ಟು ಶ್ರಮ ಪಟ್ಟಿದ್ದರು. ಇವರುಗಳ ಹಾದಿಯಲ್ಲಿ ದಿವಂಗತ ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರು ಸಹ ಸಮಾಜದಲ್ಲಿ ಅಸಮಾನತೆಯನ್ನು ಹೋಗಲಾಡಿಸಲು ಹಲವಾರು ಕಾರ್ಯ ಯೋಜನೆಗಳನ್ನು ಕೈಗೊಂಡಿದ್ದರು. ಈ ನಿಟ್ಟಿನಲ್ಲಿ ಇಂದು ನಾವು ದಿವಂಗತ ಇಂದಿರಾಗಾಂಧಿರವರ ಜನ್ಮದಿನಾಚರಣೆ ಪ್ರಯುಕ್ತ ಅವರ ನೆನಪಿನಲ್ಲಿ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆ ಕಾರ್ಯಕ್ರಮ ಆಚರಣೆ ಮಾಡುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ತಿಳಿಸಿದರು.
ಪಟ್ಟಣದ ಕೆನರಾ ಬ್ಯಾಂಕ್‌ನ ಪ್ರಬಂಧಕರಾದ ಬಿ.ನೇತ್ರ ಮಾತನಾಡಿ, ಬ್ಯಾಂಕ್‌ನ ಸಂಸ್ಥಾಪಕರಾದ ಎ.ಸುಬ್ರಾವ್ ಪೈರವರು ಸಾಮಾಜಿಕ ಕಳ-ಕಳಿ ಹೊಂದಿದ್ದು, ಕೆನರಾ ಬ್ಯಾಂಕ್ ಸ್ಥಾಪಿಸುವ ಮೂಲಕ ಎಲ್ಲರ ಏಳಿಗೆಗಾಗಿ ಶ್ರಮಿಸಿದ್ದರು. ಬ್ಯಾಂಕ್ ಮಹಿಳೆಯರ ಅಭಿವೃದ್ದಿಗಾಗಿ ಸಾಕಷ್ಟು ಮಹಿಳಾ ಸ್ವಸಹಾಯ ಸಂಘಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತಿದ್ದು, ಅದನ್ನು ಬಳಸಿಕೊಂಡು, ಪಟ್ಟಣದ ಸಾವಿರಾರು ಮಂದಿ ಮಹಿಳೆಯರು ಸ್ವಾವಲಂಬಿಗಳಾಗಿ ತಮ್ಮ ಕಾಲ ಮೇಲೆ ತಾವು ನಿಲ್ಲುವಂತಾಗಿದ್ದು, ಕುಟುಂಬದ ಕಣ್ಣಾಗಿರುವರೆಂದು, ತಿಳಿಸಿ, ಬ್ಯಾಂಕ್‌ನಿಂದ ಸಾರ್ವಜನಿಕರಿಗಾಗಿ ದೊರೆಯುವ ಸಾಲ-ಸೌಲಭ್ಯಗಳು ಹಾಗೂ ಬ್ಯಾಂಕ್‌ನ ವ್ಯವಹಾರಗಳ ಬಗ್ಗೆ ವಿವರಗಳನ್ನು ನೀಡಿದರು.
ಹಿರಿಯ ಸಾಮಾಜಿಕ ಕಾರ್ಯಕರ್ತ ವಿ.ಎನ್.ಸೂರ್ಯಪ್ರಕಾಶ್ ಅವರಿಗೆ ಶ್ರೇಷ್ಠ ರಕ್ತದಾನಿ ಪ್ರಶಸ್ತಿ ಹಾಗೂ ಶ್ರೀ.ಸಾಯಿ ಟ್ರೈನಿಂಗ್ ಸೆಂಟರ್‌ನ ಕೌಶಲ್ಯ ಅಭಿವೃದ್ಧಿ ತರಬೇತಿದಾರರಾದ ಕೆ.ಲಕ್ಷ್ಮಿ ಆನಂದ್ ಅವರಿಗೆ ಕರೋನಾ ವಾರಿಯರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಯುವಜನ ಸಮನ್ವಯ ಅಧಿಕಾರಿ ಶ್ರೀವಾಣಿ ಕೋನರೆಡ್ಡಿ, ರಾಜ್ಯ ಸರಕಾರದ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನಾಧಿಕಾರಿ ಪೂರ್ಣಿಮಾ ಜೋಗಿ, ರಾಜ್ಯ ರಾಷ್ಟ್ರೀಯ ಯುವ ಯೋಜನೆಯ ಸಂಯೋಜಕ ಡಾ.ವಿ. ಪ್ರಶಾಂತ್, ಸುದರ್ಶನ್ ಮ್ಯಾಚಿಂಗ್ ಸೆಂಟರ್‌ನ ಮಾಲಿಕರಾದ ಲೀಲಾವತಿ, ವಿಕ್ಟರಿ ಯುವಕ ಸೇವಾ ಸಂಘದ ಕಾರ್ಯದರ್ಶಿ ಸುಹೇಲ್, ರಾಷ್ಟ್ರೀಯ ಸೇವಾ ಯೋಜನಾ ಕೋಶದ ಸಿಬ್ಬಂದಿ ಸಂತೋಷ್, ಗಾಂಧಿಭವನದ ಸಿಬ್ಬಂದಿ ಮಾಬೂಬ್, ಎನ್.ಎಸ್.ಎಸ್. ಸ್ವಯಂ ಸೇವಕ ಎನ್.ಗೋಕುಲ್, ಕೆನರಾ ಬ್ಯಾಂಕ್‌ನ ವ್ಯವಹಾರ ವರದಿಗಾರರಾದ ಬಿ.ಎನ್.ಪ್ರಶಾಂತ್ ಕುಮಾರ್, ದೇವನಹಳ್ಳಿ ತಾಲೂಕಿನ ವಿವಿಧ ಯುವಕ ಸಂಘ, ಯುವತಿ ಮಂಡಳಿಗಳ ಪದಾಧಿಕಾರಿಗಳು ಹಾಗೂ ಯುವ ಮುಖಂಡರು ಇದ್ದರು.