ಭಾರತ ರತ್ನ ಕರ್ಪೂರಿ ಠಾಕೂರ, ಕ್ಷೌರಿಕ ಸಮಾಜದ ಹರ್ಷಾಭಿನಂದನೆ’


ಸಂಜೆವಾಣಿ ವಾರ್ತೆ
ಬಳ್ಳಾರಿ, ಜ.25: ಬಿಹಾರ ರಾಜ್ಯದ ಸರಳ ಸಮಾಜವಾದಿ ಜನ ನಾಯಕ ಕರ್ಪೂರಿ ಠಾಕೂರ ಅವರಿಗೆ ಇಂದು ‘ಭಾರತ ರತ್ನ’ ಪ್ರಶಸ್ತಿ ಘೋಷಣೆಯಾಗಿದ್ದು ನಿಜಾರ್ಥದಲ್ಲಿ ಅತ್ಯಂತ ಹಿಂದುಳಿದ ಸಮಾಜವಾದ ಕ್ಷೌರಿಕ ಸಮಾಜಕ್ಕೆ ರಾಷ್ಟ್ರಮಟ್ಟದಲ್ಲಿ ಸಿಕ್ಕ ಗೌರವವಾಗಿದೆ ಎಂದು ರಂಗತೋರಣದ ಅಧ್ಯಕ್ಷ ಪ್ರೊ.ಆರ್.ಭೀಮಸೇನ ಅವರು ಹರ್ಷ ವ್ಯಕ್ತಪಡಿಸಿದರು.
ಅವರು ನಗರದ ಮರ್ಚೇಡ್ ಹೋಟೆಲ್ ಸಭಾಂಗಣದಲ್ಲಿ ಕ್ಷೌರಿಕ ಸಮಾಜ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಎರಡು ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ಹಿಂದುಳಿದ ವರ್ಗಗಳ ಏಳಿಗೆಗಾಗಿ ನಿಸ್ವಾರ್ಥವಾಗಿ ಕೆಲಸ ಮಾಡಿದ ಕರ್ಪೂರಿ ಠಾಕೂರ ಅವರನ್ನು ಕರ್ನಾಟಕವೂ ಸೇರಿದಂತೆ ದೇಶದಾದ್ಯಂತ ಕ್ಷೌರಿಕ ಸಮಾಜದ ಎಲ್ಲ ಸಭೆ ಸಮಾರಂಭಗಳಲ್ಲಿ ಪ್ರಸ್ತಾಪಿಸುತ್ತ ಬರುತ್ತಿದ್ದು ಇಂದು ಅವರ ಜನ್ಮ ಶತಮಾನೋತ್ಸವ ದಿನದಂದೇ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ‘ಭಾರತ ರತ್ನ’ ಪ್ರಶಸ್ತಿ ಘೋಷಿಸಿದ್ದು ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಎಲ್ಲ ಪತ್ರಿಕೆಗಳಲ್ಲಿ ಕರ್ಪೂರಿ ಠಾಕೂರ ಅವರ ಜನ ಸೇವೆಯ ಕುರಿತಾಗಿ ಲೇಖನ ಬರೆದಿದ್ದು ಸಮಾಜವು ಹೆಮ್ಮೆಯಿಂದ ಸ್ವಾಗತಿಸಿತು. ಠಾಕೂರ ಅವರ ಜನ್ಮ ಶತಮಾನೋತ್ಸವವನ್ನು ವರ್ಷ ಪೂರ್ತಿ ಅರ್ಥಪೂರ್ಣವಾಗಿ ಎಲ್ಲ ಗ್ರಾಮ-ನಗರ-ಜಿಲ್ಲಾ ಕೇಂದ್ರಗಳಲ್ಲಿ ಆಚರಿಸಬೇಕು. ಪ್ರಧಾನಮಂತ್ರಿ ಹಾಗೂ ರಾಷ್ಟ್ರಪತಿಗಳಿಗೆ ಹರ್ಷ ಸೂಚಿಸುವ ಪತ್ರ ಬರೆಯಬೇಕು. ಎಲ್ಲ ಅಂಗಡಿ, ಸಲೂನ್‍ಗಳಲ್ಲಿ ಭಾರತ ರತ್ನ ಕರ್ಪೂರಿ ಠಾಕೂರ ಅವರ ಭಾವಚಿತ್ರ ಹಾಗೂ ಅವರ ಜೀವನ ಪರಿಚಯಿಸುವ ಕರಪತ್ರಗಳನ್ನು ಇಟ್ಟು ಎಲ್ಲರಿಗೂ ಹಂಚಬೇಕೆಂದು ಸೇರಿದ ಸಮಾಜದ ಮುಖಂಡರು ನಿರ್ಧಾರ ಮಾಡಿದರು.
ಈ ಸಭೆಯಲ್ಲಿ ತೆಲಂಗಾಣ ರಾಜ್ಯದ ಸಾಮಾಜಿಕ ಸಮರಸತಾ ವೇದಿಕೆಯ ಸಂಚಾಲಕ ಅಪ್ಪಾಲ ಪ್ರಸಾದ, ಯಾಳ್ಪಿ ತಿಪ್ಪಣ್ಣ, ಶೇಕಣ್ಣ, ರಾಕೇಶ, ಮುದ್ದಟನೂರು ತಿಪ್ಪೇಸ್ವಾಮಿ, ಹೆಚ್.ಪಾಂಡುರಂಗಪ್ಪ, ಶರಣಪ್ಪ, ನಾಗೇಂದ್ರ, ಕೃಷ್ಣಮೂರ್ತಿ, ಸೋಮಶೇಖರ, ರಾಘವೇಂದ್ರ, ಸಣ್ಣ ತಿಮ್ಮಪ್ಪ, ವೆಂಕಟೇಶ, ಸೂರಿ, ಬಾಬು, ಶಿವಕುಮಾರ, ಸಿಂಧವಾಳ ಶಶಿಕುಮಾರ, ಮಲ್ಲಿಕಾರ್ಜುನ ಸೋಮಸಮುದ್ರ ಸೇರಿದಂತೆ  ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ಹಾಗೂ ಸವಿತಾ ಸಮಾಜದ ಹಲವಾರು ಸದಸ್ಯರು ಭಾಗವಹಿಸಿದ್ದರು. ಬಯಲಾಟ ತಿಪ್ಪೇಸ್ವಾಮಿ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಕರ್ಪೂರಿ ಠಾಕೂರ ಅವರ ಭಾವಚಿತ್ರಕ್ಕೆ ವೇದಿಕೆ ಸೇರಿದಂತೆ ಹಾಜರಿದ್ದ ಎಲ್ಲರೂ ಪುಷ್ಪಾರ್ಚನೆ ಮಾಡಿದರು. ಕಾರ್ಯಕ್ರಮದಲ್ಲಿ ಡಾ.ಜಿ.ಆರ್. ವಸ್ತ್ರದ ರಂಗತೋರಣದ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು, ಅಡವಿಸ್ವಾಮಿ, ಪ್ರವೀಣ ನಾಯಕ ಮತ್ತಿತರರು ಹಾಜರಿದ್ದರು.