ಭಾರತ ಮಾತೆ ಸೇವೆಗೆ ಸಿದ್ಧರಾಗಿ

ಬೀದರ್:ಮಾ.16: ಯುವಕರು ಭಾರತ ಮಾತೆ ಸೇವೆಗೆ ಸಿದ್ಧರಾಗಬೇಕು ಎಂದು ಶಾಸಕ ರಹೀಂಖಾನ್ ಹೇಳಿದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘದ ವತಿಯಿಂದ ಇಲ್ಲಿಯ ಬೆನಕನಳ್ಳಿ ರಸ್ತೆಯಲ್ಲಿ ಇರುವ ಗ್ಲೊಬಲ್ ಸೈನಿಕ ಅಕಾಡೆಮಿಯಲ್ಲಿ ಹಮ್ಮಿಕೊಳ್ಳಲಾದ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳ ಸೇನಾ ಭರ್ತಿ ಪೂರ್ವ ಸಿದ್ಧತಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೆಕೆಎಚ್‍ಆರ್‍ಎಸಿಎಸ್ ತರಬೇತಿ ಶಿಬಿರಗಳ ಮೂಲಕ ಸೇನೆಗೆ ಸೇರ ಬಯಸುವ ಅಭ್ಯರ್ಥಿಗಳಿಗೆ ನೆರವಾಗುತ್ತಿದೆ. ಯುವಕರು ತರಬೇತಿಯ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.

ಬಸವರಾಜ ಪಾಟೀಲ ಸೇಡಂ ಅವರ ದೂರದೃಷ್ಟಿಯ ಫಲವಾಗಿ ಸಂಘದಿಂದ ಈ ಭಾಗದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಆಗಿವೆ. ಸಮಾಜಕ್ಕೆ ಸಹಕಾರಿಯಾಗುವ ಚಟುವಟಿಕೆಗಳು ನಡೆಯುತ್ತಿವೆ ಎಂದು ಹೇಳಿದರು.

ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ಮೂರು ತಿಂಗಳ ಪೂರ್ವ ಸಿದ್ಧತಾ ತರಬೇತಿಯ ಅಗ್ನಿ ಪರೀಕ್ಷೆಯಲ್ಲಿ ಪಾಸಾದವರು ಅಗ್ನಿವೀರ ಹಾಗೂ ಅಗ್ನಿಪಥದಡಿ ಸುಲಭವಾಗಿ ಆಯ್ಕೆಯಾಗಬಹುದು ಎಂದು ತಿಳಿಸಿದರು.

ಸೇನೆ ದೇಶದ ಸೇವೆ ಜತೆಗೆ ಬದುಕು ಕಟ್ಟಿಕೊಳ್ಳಲು ಒಳ್ಳೆಯ ಅವಕಾಶ ಒದಗಿಸಿಕೊಡಲಿದೆ. ಹೀಗಾಗಿ ಸಂಘದಿಂದ ಯುವಕರಲ್ಲಿ ಸೇನೆ ಅರಿವು ಮೂಡಿಸಲಾಗುತ್ತಿದೆ. ಸೇನಾ ಭರ್ತಿಗೆ ಪೂರಕವಾಗಿ ತರಬೇತಿ ಕೊಡಲಾಗುತ್ತಿದೆ ಎಂದು ಹೇಳಿದರು.

ಬೀದರ್ ವಾಯುಪಡೆ ತರಬೇತಿ ಕೇಂದ್ರದ ಸ್ಕ್ವಾಡ್ರನ್ ಲೀಡರ್ ಎಚ್. ಸೌರನ್ ಮಾತನಾಡಿ, ಸೇನೆ ತರಬೇತಿ ಜೀವನದಲ್ಲಿ ಶಿಸ್ತು, ಪ್ರಾಮಾಣಿಕತೆ ಕಲಿಸಿಕೊಡುತ್ತದೆ. ಸೇನಾ ಭರ್ತಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.

ಗ್ಲೊಬಲ್ ಸೈನಿಕ ಅಕಾಡೆಮಿಯ ಮುಖ್ಯಸ್ಥ ನಿವೃತ್ತ ಕರ್ನಲ್ ಶರಣಪ್ಪ ಸಿಕೇನಪುರ ಮಾತನಾಡಿ, ಸೇನೆಯಲ್ಲಿ ಇರುವ ಉದ್ಯೋಗ ಅವಕಾಶಗಳ ಬಗ್ಗೆ ಈ ಭಾಗದಲ್ಲಿ ಹೆಚ್ಚು ಅರಿವು ಇಲ್ಲ. ಅಕಾಡೆಮಿ ಸೇನೆಯ ಅವಕಾಶ ಹಾಗೂ ಗೌರವಯುತ ಬದುಕಿನ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದು ತಿಳಿಸಿದರು.

ಕೆಕೆಎಚ್‍ಆರ್‍ಎಸಿಎಸ್ ಪ್ರಾಯೋಜಕತ್ವದಲ್ಲಿ ಎರಡು ತಂಡಗಳ ತರಬೇತಿ ಯಶಸ್ವಿಯಾಗಿ ನಡೆಸಲಾಗಿದೆ. ಸೇನಾ ಭರ್ತಿಯಲ್ಲಿ ಶಿಬಿರಗಳಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.

ಸುಬೆದಾರ್ ಮೇಜರ್‍ಗಳಾದ ಮಡೆಪ್ಪ, ರಾಮ, ಪಿಆರ್‍ಒ ಕಾರಂಜಿ ಸ್ವಾಮಿ, ಜಿ.ಎಸ್.ಎಸ್. ನಿರ್ದೇಶಕರಾದ ಡಾ. ರಘು ಕೃಷ್ಣಮೂರ್ತಿ, ಆರ್.ಜಿ. ಹಿರೇಮಠ ಉಪಸ್ಥಿತರಿದ್ದರು.

ಅನುಪ್ರಿಯಾ ಬಿಲ್ಲಾ ಸ್ವಾಗತಿಸಿದರು. ಸ್ಕ್ವಾಡ್ರನ್ ಲೀಡರ್ ಇವೆಲಿನ್ ಜಾರ್ಜ್ ವಂದಿಸಿದರು.

ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳ ಆಯ್ಕೆಯಾದ 250 ಅಭ್ಯರ್ಥಿಗಳು ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.