ಭಾರತ ಮಾತೆ ಎಂದರೆ ದುರ್ಗಾ ಮಾತೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಅ.೧೬; ಭಾರತ ಮಾತೆ ಬೇರೆ ಅಲ್ಲ. ದುರ್ಗಾ ಮಾತೆ ಬೇರೆ ಅಲ್ಲ. ಭಾರತ ಮಾತೆ ಎಂದರೆ ದುರ್ಗಾ ಮಾತೆ. ದುರ್ಗಾ ಮಾತೆ ಎಂದರೆ ಭಾರತ ಮಾತೆ ಎಂದು ವಿನೋಬ ನಗರದ ಜಡೇ ಸಿದ್ದೇಶ್ವರ ಮಠದ ಶ್ರೀಶಿವಾನಂದ ಸ್ವಾಮೀಜಿ ತಿಳಿಸಿದರು.ಶ್ರೀಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಸಾರ್ವಜನಿಕ ವಿಜಯದಶಮಿ ಉತ್ಸವ ಸಮಿತಿಯಿಂದ ಏರ್ಪಡಿಸಿದ್ದ ಶ್ರೀದೇವಿಯ ಘಟಸ್ಥಾಪನೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ದುರ್ಗಾ ಮಾತೆಯಲ್ಲಿನ ಎಲ್ಲ ಗುಣಗಳು ಭಾರತ ಮಾತೆಯಲ್ಲಿ ಇವೆ. ಹಾಗಾಗಿ ಭಾರತ ಮತ್ತು ದುರ್ಗಾ ಮಾತೆ ಒಂದೇ ಎಂದು ತಿಳಿಸಿದರು.ಭಾರತೀಯ ಸಂಸ್ಕೃತಿ ಅತಿ ವಿಶೇಷವಾದುದು. ಶ್ರದ್ಧೆ, ಭಕ್ತಿ, ವಿಶ್ವಾಸದಿಂದ ದೇವಿಯ ಆರಾಧನೆ ಮಾಡುವುದರಿಂದ ನಮ್ಮೊಳಗಿನ ಆಂತರಿಕ, ಆತ್ಮಶಕ್ತಿಯನ್ನ ಪರಿಚಯ ಮಾಡಿಕೊಡುವ ಹಬ್ಬವೇ ದಸರಾ ಎಂದು ತಿಳಿಸಿದರು.ಶಿವನನ್ನು ಒಂದೇ ರಾತ್ರಿಯಲ್ಲಿ ಒಲಿಸಿಕೊಳ್ಳಬಹುದು. ಹಾಗಾಗಿಯೇ ಶಿವರಾತ್ರಿಯನ್ನ ಆಚರಿಸಲಾಗುತ್ತದೆ. ಆದರೆ, ದೇವಿಯನ್ನ ಒಂಭತ್ತು ದಿನಗಳ ಕಾಲ ಪೂಜಿಸಿ, ಆರಾಽಸಿ ಒಲುಮೆಗೆ ಪಾತ್ರವಾಗಬೇಕು ಎಂದು ನವರಾತ್ರಿಯ ಆಚರಣೆ ಮಾಡಲಾಗುತ್ತದೆ. ಪ್ರತಿಯೊಬ್ಬರಲ್ಲಿನ ಶಕ್ತಿಯನ್ನ ಪರಿಚಯ ಮಾಡಿಕೊಡುವ ಉತ್ಕೃಷ್ಟ ಪರ್ವವೇ ದಸರಾ ಎಂದು ತಿಳಿಸಿದರು.ಶ್ರೀದೇವಿಯನ್ನ ಚಂಡ-ಮುಂಡ ಎಂಬ ರಾಕ್ಷಸರನ್ನ ಸಂಹಾರ ಮಾಡಿದ್ದರಿಂದ ಚಾಮುಂಡೇಶ್ವರಿ, ಕಷ್ಟಗಳನ್ನ ನಿವಾರಣೆ ಮಾಡುವಂತಹ ಶಕ್ತಿ ಹೊಂದಿರುವ ಕಾರಣಕ್ಕೆ ದುರ್ಗಾ… ಹೀಗೆ ಅನೇಕ ಎಂದರೆ ಸಾವಿರಾರು ಹೆಸರುಗಳಿಂದ ಕರೆಯಲಾಗುತ್ತದೆ. ಸಾವಿರಾರು ಹೆಸರುಗೂಡಿರುವ ಭಗವತಿಯನ್ನ ಪೂಜೆ ಮಾಡುವುದರಿಂದ ನಮ್ಮೊಳಗಿನ ಶಕ್ತಿಯ ಪರಿಚಯ ನಮಗೆ ಆಗುತ್ತದೆ ಎಂದು ತಿಳಿಸಿದರು.ನಮ್ಮಲ್ಲಿನ ದಶ ಇಂದ್ರಿಯಗಳ ಮೇಲೆ ನಿಯಂತ್ರಣವ ಸಾಽಸಿ ಶಾಂತಿ, ನೆಮ್ಮದಿ ದೊರೆಯುವ ಜೊತೆಗೆ ಆತ್ಮವಿಶ್ವಾಸ, ಆತ್ಮಶಕ್ತಿ ಆವಿರ್ಭಿಸುವ ಮೂಲ ಶಕ್ತಿ ಯನ್ನ ತೋರಿಸುವ ಕಾರಣಕ್ಕೆ ಹತ್ತು ದಿನಗಳ ಕಾಲ ದೇವಿಯ ಆರಾಧನೆ ಮಾಡುವುದರಿಂದ ಶರನ್ನವರಾತ್ರಿ ಎಂದು ಕರೆಯಲಾಗುತ್ತದೆ. ಪ್ರತಿ ದಿನ ದೇವಿಯ ಆರಾಧನೆ, ಪಾರಾಯಣ, ಸ್ತ್ರೋತ್ರಗಳ ಪಠಣ ಮಾಡಬೇಕು ಎಂದು ತಿಳಿಸಿದರು.ಶರನ್ನವರಾತ್ರಿ ಸಂದರ್ಭದಲ್ಲಿ ಮಾತ್ರವಲ್ಲ ಸದಾ ಕಾಲ ದೇವಿಯನ್ನ ಶ್ರದ್ಧೆ, ವಿಶ್ವಾಸ, ಭಕ್ತಿಯಿಂದ ಪೂಜಿಸಬೇಕು. ದುರ್ಗಾಮಾತೆ ಒಂದು ಜಾತಿ, ಮತ, ಪಂಥ, ಸಮುದಾಯಕ್ಕೆ ಸೀಮಿತವಾದ ದೇವತೆ ಅಲ್ಲವೇ ಅಲ್ಲ. ಸಕಲ ಮಾನವ ಕುಲಕೋಟಿಯಲ್ಲಿ ಸುಪ್ತವಾಗಿರುವ ಶಕ್ತಿಯನ್ನ ಪರಿಚಯಿಸಿಕೊಡುವ ಮಹಾನ್ ಶಕ್ತಿ ಎಂದು ತಿಳಿಸಿದರು.ಮಾಜಿ ಮೇಯರ್ ಎಸ್.ಟಿ. ವೀರೇಶ್, ಸದಸ್ಯ ಕೆ.ಎಂ. ವೀರೇಶ್, ದಾವಣಗೆರೆ-ಹರಿಹರ ಅಭಿವೃದ್ಧಿ ಪ್ರಾಽಕಾರದ ಮಾಜಿ ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್, ದೇವರಮನೆ ಶಿವಕುಮಾರ್, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಸತೀಶ್ ಪೂಜಾರಿ,ವೈ. ಮಲ್ಲೇಶ್, ಎಂ. ಜಯಕುಮಾರ್, ವಿನಾಯಕ ರಾನಡೆ, ಜಿ.ಎಚ್. ಶಂಭುಲಿಂಗಪ್ಪ, ಧನುಷ್, ಎಚ್.ಸಿ. ಜಯಮ್ಮ, ಭಾಗ್ಯ ಪಿಸಾಳೆ, ಶಿವನಗೌಡ ಟಿ. ಪಾಟೀಲ್, ರಾಜು, ಚೇತನಾ ಶಿವಕುಮಾರ್, ನವೀನ್ ಇತರರು ಇದ್ದರು. ನಿಟುವಳ್ಳಿಯ ಶ್ರೀ ದುರ್ಗಾಂಬಿಕಾ ದೇವಸ್ಥಾನದಿಂದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ನಡೆಸಲಾಯಿತು.