ಭಾರತ ಮಹಿಳಾ ಕಾಂಗ್ರೆಸ್ ಸಂಸ್ಥಾಪನ ದಿನ

ಅರಸೀಕೆರೆ, ಸೆ. ೧೭- ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಸಂಸ್ಥಾಪನಾ ದಿನದ ಅಂಗವಾಗಿ ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷೆ ಸುಶ್ಮಿತಾ ದೇವ್ ಅವರ ಆದೇಶದ ಮೇರೆಗೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ತಾಲ್ಲೂಕು ಅಧ್ಯಕ್ಷೆ ಜಯಪದ್ಮ ತಿಳಿಸಿದರು.
ಇಲ್ಲಿನ ಸುಭಾಷ್ ನಗರ ಬಡಾವಣೆಯಲ್ಲಿ ಪಕ್ಷದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಾಲ್ಲೂಕು ಅಧ್ಯಕ್ಷೆ ಜೆ. ಜಯಪದ್ಮ, ಸ್ವಾತಂತ್ರ್ಯ ಚಳವಳಿಯ ಮೂಲಕ ಸ್ಥಾಪನೆಗೊಂಡ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಭವ್ಯ ಇತಿಹಾಸವಿದೆ. ಜಾತ್ಯಾತೀತ ರಾಷ್ಟ್ರೀಯ ಭಾವೈಕ್ಯತೆ ಪಕ್ಷ ಸಂಘಟನೆ ಮಾಡುತ್ತಿದ್ದು, ಸರ್ವರಿಗೂ ಸಮಾನತೆ ಕಲ್ಪಿಸಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದರು.
ಕೊರೊನಾ ಸೋಂಕಿನಿಂದ ಜನರ ಬದುಕು ದುಸ್ತರವಾಗಿದೆ. ಪಕ್ಷದ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಜನರಲ್ಲಿ ಜಾಗೃತಿ ಮೂಡಿಸುವ ಜತೆಗೆ ತಮ್ಮ ಕೈಲಾದ ಸಹಾಯ ಹಸ್ತ ನೀಡುತ್ತಿದ್ದಾರೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಎಲ್ಲ ರಂಗದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಕಾರಣ ನಮ್ಮ ಪಕ್ಷವು ಮಹಿಳೆಯರಿಗೆ ವಿಶೇಷ ಸ್ಥಾನಮಾನ ನೀಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಮೀನಾ, ಕಾರ್ಯದರ್ಶಿ ಗೀತಾ, ಮಮತಾ, ಲಕ್ಷ್ಮಿ, ಸುಮಾ, ಕಲ್ಪನಾ, ಮಧು, ಉಷಾ ಮತ್ತಿತರರು ಭಾಗವಹಿಸಿದ್ದರು.