ಭಾರತ-ಪಾಕ್ ಗಡಿ ನಿಶ್ಯಬ್ಧ

ನವದೆಹಲಿ, ಏ.೨೦: ಭಾರತ-ಪಾಕಿಸ್ತಾನದ ಸೇನೆಗಳು ಫೆಬ್ರವರಿಯಲ್ಲಿ ಕದನ ವಿರಾಮ ಒಪ್ಪಂದಕ್ಕೆ ಬದ್ಧವಾಗಿರಲು ಒಪ್ಪಿಕೊಂಡಿರುವುದರಿಂದ, ಗಡಿ ನಿಯಂತ್ರಣ ರೇಖೆಯಾದ್ಯಂತ ಯಾವುದೇ ಗುಂಡಿನ ದಾಳಿ ನಡೆದಿಲ್ಲ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರಾವಣೆ ಹೇಳಿದ್ದಾರೆ.
ಚೀನಾದೊಂದಿಗಿನ ಸಂಘರ್ಷಕ್ಕೆ ಸಂಬಂಧಿಸಿದಂತೆ, ಮಾತುಕತೆಗಳ ಮೂಲಕ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ಇದೆ ತಿಳಿಸಿದ್ದಾರೆ.
ಆಸ್ಟ್ರೇಲಿಯಾ ಸೇನೆ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ನರಾವಣೆ, “ಗಡಿ ಸಮಸ್ಯೆಗಳು ಮತ್ತು ಭಿನ್ನಾಭಿಪ್ರಾಯಗಳನ್ನು ಪರಸ್ಪರ ಸಮ್ಮತಿ ಮತ್ತು ಮಾತುಕತೆಯ ಮೂಲಕ ಪರಿಹರಿಸಬೇಕಾಗಿದೆಯೇ ಹೊರತು ಏಕಪಕ್ಷೀಯ ಕ್ರಮಗಳಿಂದಲ್ಲ” ಎಂದು ಚೀನಾಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಭಾರತವು ೧೫,೦೦೦ ಕಿ.ಮೀ.ಗೂ ಹೆಚ್ಚು ಭೂ ಗಡಿಯನ್ನು ಹೊಂದಿದೆ ಮತ್ತು “ಪಾಕಿಸ್ತಾನದೊಂದಿಗೆ ನಮ್ಮ ಪಶ್ಚಿಮಕ್ಕೆ ಮತ್ತು ಚೀನಾದೊಂದಿಗೆ ಉತ್ತರ ಮತ್ತು ಪೂರ್ವಕ್ಕೆ ಸಕ್ರಿಯ ಮತ್ತು ಅಸ್ಥಿರ ಗಡಿಗಳನ್ನು ಹೊಂದಿದೆ. ಹಾಗಾಗಿಯೇ ಸಹಜವಾಗಿ ಅನೇಕ ಸವಾಲುಗಳಿವೆ. ಮುಂದೆ ಎದುರಾಗುವ ಎಲ್ಲಾ ಸವಾಲುಗಳನ್ನು ಎದುರಿಸಲು ಕಾರ್ಯಸನ್ನದ್ಧವಾಗಿದ್ದೇವೆ ಎಂದು ಹೇಳಿದರು.
ಪಾಕಿಸ್ತಾನ ಕುರಿತು ಮಾತನಾಡಿದ ಅವರು, “ನಾವು ಇತ್ತೀಚೆಗೆ ಫೆಬ್ರವರಿಯಲ್ಲಿ ತಮ್ಮ ಸೇನೆಯೊಂದಿಗೆ ಕದನ ವಿರಾಮ ತಿಳುವಳಿಕೆಗೆ ಇಳಿದಿದ್ದೇವೆ ಮತ್ತು ಅಂದಿನಿಂದ ಗಡಿ ನಿಯಂತ್ರಣ ರೇಖೆಯಲ್ಲಿ ಯಾವುದೇ ಗುಂಡಿನ ಚಕಮಕಿ ನಡೆದಿಲ್ಲ, ಇದು ಭವಿಷ್ಯ ದಿನಗಳಿಗೆ ಒಳ್ಳೆಯ ಕ್ರಮ” ಎಂದು ಅವರು ಹೇಳಿದರು.
“ಚೀನಾದೊಂದಿಗೆ, ಭೂ ಗಡಿಗಳ ಹೊಂದಾಣಿಕೆಯ ಬಗ್ಗೆ ಎರಡೂ ದೇಶಗಳು ವಿಭಿನ್ನ ಗ್ರಹಿಕೆಗಳನ್ನು ಹೊಂದಿರುವ ಕಾರಣ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಸಕಾರಾತ್ಮಕ ಬೆಳವಣಿಗೆಗಳು ನಡೆದಿವೆ. ಇದು ಪೂರ್ವ ಲಡಾಖ್‌ನಲ್ಲಿ ಸೈನ್ಯವನ್ನು ನಿಷ್ಕ್ರಿಯಗೊಳಿಸಲು ಕಾರಣವಾಗಿದೆ. ನಾವು ಇತ್ತೀಚೆಗೆ ಎರಡೂ ಸೇನೆಗಳ ನಡುವಿನ ಕಾರ್ಪ್ಸ್ ಕಮಾಂಡರ್ ಮಟ್ಟದ ೧೧ನೇ ಸುತ್ತಿನ ಮಾತುಕತೆ ಕೊನೆಗೊಂಡಿದೆ. ಆದರೆ, ಮುಂದಿನ ಮಾತುಕತೆಗಳ ಮೂಲಕ ನಮ್ಮ ಇತರ ಗಡಿಯನ್ನು ಇತ್ಯರ್ಥಪಡಿಸುವ ಭರವಸೆ ನಮಗಿದೆ.”
ಭಾರತವು ತನ್ನ ಎಲ್ಲ ನೆರೆಹೊರೆಯವರೊಂದಿಗೆ, ಜೊತೆಗೆ ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಲು ಎದುರು ನೋಡುತ್ತಿದೆ. “ಶಾಂತಿ ಮತ್ತು ನೆಮ್ಮದಿಯ ನಿರ್ವಹಣೆಗೆ ಉಭಯ ದೇಶಗಳ ಪ್ರಯತ್ನಗಳ ಅಗತ್ಯವಿದೆ. ನಿಯಮಾಧಾರಿತ ವ್ಯವಸ್ಥೆಯನ್ನು ಎತ್ತಿಹಿಡಿಯಲು, ಅಂತಾರಾಷ್ಟ್ರೀಯ ಕಾನೂನು ಮತ್ತು ನಿಯಮಗಳನ್ನು ಗೌರವಿಸಲು ಮತ್ತು ಕಾಪಾಡಲು ಎಲ್ಲಾ ರಾಷ್ಟ್ರಗಳು ಒಗ್ಗೂಡಬೇಕಾಗಿದೆ.” ಎಂದು ಹೇಳಿದರು.