
ಮಂಡ್ಯ.ಫೆ.23:- ಅತಿ ಹೆಚ್ಚು ಯುವ ಮಾನವ ಸಂಪನ್ಮೂಲ ಹೊಂದಿರುವ ದೇಶ ಭಾರತವಾಗಿದೆ. ಯುವಕರು ದೇಶ ಮತ್ತು ಸಮಾಜದ ಶಕ್ತಿಯಾಗಿ ಭಾರತ ದೇಶ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕ ಗಂಗಯ್ಯ ಅವರು ತಿಳಿಸಿದರು.
ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬ್ಯಾಂಕ್ ಆಫ್ ಬರೋಡ ಸ್ವ- ಉದ್ಯೋಗ ತರಬೇತಿ ಸಂಸ್ಥೆ, ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ ಪದವಿ ಘಟಕಗಳು, ಮಹಿಳಾ ಸರ್ಕಾರಿ ಕಾಲೇಜು(ಸ್ವಯತ್ತ) ಮಂಡ್ಯ ಇವರ ಸಂಯುಕ್ತಾಶ್ರಯದಲ್ಲಿ ಬ್ಯಾಂಕ್ ಬರೋಡ ಆರ್ ಸೆ ಟಿ ಸ್ವ-ಉದ್ಯೋಗ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಯುವ ಮುಂದಾಳತ್ವ ಹಾಗೂ ಸಮುದಾಯ ಅಭಿವೃದ್ಧಿ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಶಕ್ತಿಯಿಂದಲೇ ದೇಶದ ಪ್ರಗತಿ ಸಾಧ್ಯ. ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೃಷಿ, ಕೈಗಾರಿಕಾ, ಕ್ರೀಡೆ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಸಹ ಯುವಕರ ಪಾತ್ರ ಬಹಳ ಪ್ರಮುಖವಾಗಿದೆ ಎಂದರು.
ಇತಿಹಾಸದ ಮಹಾ ಪುರುಷರು ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇಂದಿನ ಯುವ ಶಕ್ತಿ ಇದನ್ನು ಅರಿತು ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವೃದ್ಧಿ ಜತೆಗೆ ನಾನಾ ಸಮಸ್ಯೆಗಳು ಇದೆ. ಸಮಸ್ಯೆಯನ್ನು ಬಗೆಹರಿಸುವ ಹಾದಿಯಲ್ಲಿ ಯುವ ಶಕ್ತಿಯ ಮನಸ್ಥಿತಿ ಬದಲಾಗಬೇಕಿದೆ. ಯುವಕರಲ್ಲಿ ಶಿಕ್ಷಣ, ಸಂಘಟನೆ, ಹೋರಾಟ ಇದ್ದಾಗ ಮಾತ್ರ ಪ್ರಜಾಪ್ರಭುತ್ವ ಬಲಗೊಳ್ಳಲು ಸಾಧ್ಯ ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಓಂಪ್ರಕಾಶ್ ಜಿ ಅವರು ಮಾತನಾಡಿ, ಯುವಕರು ಸಾಧನೆಗೆ ದೊಡ್ಡ ಗುರಿ ನಿಗದಿ ಮಾಡಿಕೊಳ್ಳಬೇಕು. ದುಶ್ಚಟಗಳಿಂದ ದೂರವಿರಿ, ಜೀವನವನ್ನು ಉತ್ತಮಗೊಳಿಸುವ ಹವ್ಯಾಸವನ್ನು ರೂಢಿಸಿಕೊಳ್ಳಿ ಎಂದು ಯುವ ಸಮೂಹಕ್ಕೆ ಸಲಹೆ ನೀಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವೃದ್ಧಿಯಾಗಬೇಕಾದರೆ ವಿಶೇಷವಾಗಿ ಯುವ ಪೀಳಿಗೆ ಶಕ್ತಿಯಾಗಿ ನಿಲ್ಲಬೇಕಿದೆ. ಸಮಾಜ ನಮಗೆ ಏನು ಕೊಟ್ಟಿದೆ ಅನ್ನುವುದಕ್ಕಿಂತ ನಾವು ಸಮಾಜಕ್ಕೆ ಏನು ಕೊಡಬೇಕು ಎನ್ನುವ ನಿಟ್ಟಿನಲ್ಲಿ ಯೋಚಿಸಬೇಕಿದೆ ಎಂದು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕøತೆ ಬಿ.ಎಸ್ ಅನುಪಮ ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಎನ್. ಆರ್ ವೇಣುಗೋಪಾಲ್, ಕಾವೇರಿ ನೀರಾವರಿ ನಿಗಮದ ಕಿರಿಯ ಅಭಿಯಂತರ ಜಿ.ಎನ್ ಕೆಂಪರಾಜು, ವಿಕಸನ ಸಂಸ್ಥೆಯ ನಿರ್ದೇಶಕ ಮಹೇಶ್ ಚಂದ್ರಗುರು, ವಿಶ್ರಾಂತ ಜಿಲ್ಲಾ ಸಮನ್ವಯಾಧಿಕಾರಿ ಬಿ.ಗೋವಿಂದ ಭಟ್ ಸೇರಿದಂತೆ ಇನ್ನಿತರರು ಹಾಜರಿದ್ದರು.