
ಬೆಂಗಳೂರು, ನ.೧೯-ಇಂದು ನಡೆಯುವ ವಿಶ್ವ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ನಡೆಯುವ ಫೈನಲ್ ಹೋರಾಟದಲ್ಲಿ ಭಾರತ ಜಯಶಾಲಿಯಾಗಲಿ ಎನ್ನುವ ಕೂಗು ಎಲ್ಲೆಡೆ ಕೇಳಿಬರುತ್ತಿದ್ದು,ಟೀಂ ಇಂಡಿಯಾಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ನಡೆಯುವ ಫೈನಲ್ ಕ್ರಿಕೆಟ್ ಪಂದ್ಯ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದು, ಇನ್ನೊಂದೆಡೆಮಾಜಿ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಹಾಗೂ ಹೆಚ್.ಡಿ ಕುಮಾರಸ್ವಾಮಿ ಕೂಡ ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಬೊಮ್ಮಾಯಿ, ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಕ್ರಿಕೆಟ್ ಪೈನಲ್ ಪಂದ್ಯ ನೋಡಲು ಇಡೀ ಜಗತ್ತಿನ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ನಾನೂ ಫೈನಲ್ ಪಂದ್ಯ ನೋಡಲು ಕಾತುರನಾಗಿದ್ದೇನೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಈ ಬಾರಿ ವಿಶ್ವ ಕಪ್ ಗೆಲ್ಲುವ ಫೆವರಿಟ್ ತಂಡವಾಗಿದೆ ಎಂದಿದ್ದಾರೆ.
ರನ್ ಮಷಿನ್ ವಿರಾಟ್ ಕೋಹ್ಲಿಯ ರನ್ ಹೊಳೆ, ಮೊಹಮದ್ ಶಮಿಯ ಬೌಲಿಂಗ್ ದಾಳಿ, ಸಂಘಟಿತ ಹೋರಾಟದಿಂದ ಭಾರತ ತಂಡ ಮೂರನೇ ಬಾರಿ ವಿಶ್ವಕಪ್ ಎತ್ತಿ ಹಿಡಿಯುತ್ತದೆ ಎನ್ನುವ ಅಚಲ ವಿಶ್ವಾಸ ನನಗಿದೆ. ಭಾರತ ಕ್ರಿಕೆಟ್ ತಂಡ ಜಯಶಾಲಿಯಾಗಿ ಮೂರನೇ ಬಾರಿ ಕ್ರಿಕೆಟ್ ಲೋಕದ ವಿಶ್ವ ಚಾಂಪಿಯನ್ ಆಗಲಿ ಎಂದು ಶುಭ ಹಾರೈಸುತ್ತೇನೆ ಎಂದು ಉಲ್ಲೇಖಿಸಿದ್ದಾರೆ.
ಹೆಚ್.ಡಿ ಕುಮಾರಸ್ವಾಮಿ ಸಹ, ವಿಶ್ವಕಪ್ ಸರಣಿಯಲ್ಲಿ ಈವರೆಗೆ ಎಲ್ಲ ಪಂದ್ಯಗಳನ್ನು ಜಯಿಸಿ ಅಜೇಯವಾಗಿರುವ ಭಾರತ ತಂಡ ವಿಶ್ವಕಪ್ ಗೆಲ್ಲಬೇಕು. ನಮ್ಮೆಲ್ಲರ ಹಾರೈಕೆ, ಕನಸುಗಳೆಲ್ಲವೂ ಟೀಂ ಇಂಡಿಯಾ ಜೊತೆಯಲ್ಲಿವೆ. ಭಾರತ ಗೆದ್ದು ಬರಲಿ. ಎಲ್ಲರೂ ಹಾರೈಸೋಣ ಎಂದಿದ್ದಾರೆ.
ಇತ್ತ ಸಿಎಂ ಸಿದ್ದರಾಮಯ್ಯ ಅವರು ನಿನ್ನೆಯೇ ಎಕ್ಸ್ ಮಾಡಿದ್ದು, ನಾಳಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾಕೂಟದ ಫೈನಲ್ ಪಂದ್ಯದಲ್ಲಿ ಭಾರತೀಯರ ಗೆಲುವನ್ನು ಸಂಭ್ರಮಿಸಲು ನಾನು ಎಲ್ಲರಂತೆ ಕಾತುರನಾಗಿದ್ದೇನೆ. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಎಲ್ಲಾ ವಿಭಾಗಗಳಲ್ಲೂ ನಮ್ಮದು ಒಂದು ಪರಿಪೂರ್ಣ ತಂಡವಾಗಿರುವುದರಿಂದ ಈ ಬಾರಿಯ ವಿಶ್ವಕಪ್ ಭಾರತದ ಮಡಿಲು ಸೇರುವುದು ನಿಶ್ಚಿತ ಎಂದಿದ್ದಾರೆ.