ಭಾರತ ಟಿ-20 ವಿಶ್ವಕಪ್ ಚಾಂಪಿಯನ್ ; ಹರಿಣಗಳ ವಿರುದ್ಧ 7 ರನ್ ಗಳ ರೋಚಕ ಜಯ

ಬ್ರಿಜ್ ಟೌನ್: ಭಾರತ ಟಿ.20 ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸಿದೆ.ಇಂದು ಬ್ರಿಜ್ ಟೌನ್ ನಲ್ಲಿಂದು ದಕ್ಷಿಣ ಆಫ್ರಿಕಾದ‌ ವಿರುದ್ಧ ನಡೆದ ಫೈನಲ್ ಕದನದಲ್ಲಿ 7 ರನ್ ಗಳ ರೋಚಕ ಜಯ ಸಾಧಿಸಿ ವಿಶ್ವಕಪ್ ಮುತ್ತಿಕ್ಕಿತು.
ಎಂಎಸ್ ಧೋನಿ ನಂತರ ರೋಹಿತ್ ಶರ್ಮಾ ನಾಯಕತ್ವದಲ್ಲಿ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು. ಗೆಲವು‌ ಸಾಧಿಸುತ್ತಿದ್ದಂತೆ ಹರಿಣಗಳ ಪಾಳಯದಲ್ಲಿ ನಿರಾಸೆಯ ಕಾರ್ಮೋಡ ಕವಿಯಿತು.
177 ರನ್ ಗುರಿಯನ್ನು ಬೆನ್ನಹತ್ತಿದ ದಕ್ಷಿಣ ಆಫ್ರಿಕಾ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ವೀರೋಚಿತ ಸೋಲು ಕಂಡಿತು. ಹೆನ್ರಿಚ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದು ವ್ಯರ್ಥ ವಾಯಿತು. 27 ಎಸೆತಗಳಲ್ಲಿ 52 ರನ್ ಗಳಿಸಿದರು. ಕ್ವಿಂಟನ್ ಡೀ ಕಾಕ್ 39, ಸ್ಡಬ್ಸ್ 31, ಡೇವಿಡ್ ಮಿಲ್ಲರ್ 21 ರನ್ ಗಳಿಸಿದರು. ಸೂರ್ಯಕುಮಾರ್ ಬೌಂಡರಿ ಬಳಿ ಹಿಡಿದ ಅದ್ಬುತ ಕ್ಯಾಚ್ ಗೆ ಮಿಲ್ಲರ್ ಔಟಾದರು.
ಅಂತಿಮವಾಗಿ ದಕ್ಷಿಣ ಆಫ್ರಿಕಾ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿದರು.
ಭಾರತದ ಪರ ಪಾಂಡ್ಯ 3, ಅರ್ಷ್ ದೀಪ್ ಹಾಗೂ ಬೂಮ್ರಾ ತಲಾ ಎರಡು ವಿಕೆಟ್ ಪಡೆದರೆ, ಜಡೇಜ ವಿಕೆಟ್ ಗಳಿಸಿದರು.
ಗೆಲುವು ಸಾಧಿಸುತ್ತಿದ್ದಂತೆ ಕ್ರೀಡಾಂಗಣದಲ್ಲಿ ನರೆದಿದ್ದ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಒಂದು ಹಂತದಲ್ಲಿ ಅಕ್ಷರ್ ಪಟೇಲ್ ಓವರ್ ನಲ್ಲಿ 22 ನೀಡಿದರು. ಆಗ ಪಂದ್ಯ ಭಾರತದಿಂದ ಗೆಲುವು ಕೃ.ತಪ್ಪಿತ್ತು. ಆದರೆ ಭಾರತೀಯ ಬೌಲರ್ ಕೈಚಳ ಪ್ರದರ್ಶಿಸಿ ಭಾರತಕ್ಕೆ ವಿಜಯದ ಮಾಲೆ ತೊಡಿಸಿದರು. ಈ ಮೂಲಕ ಮುಖ್ಯ ತರಬೇತುದಾರನ ಹುದ್ದೆಯಿಂದ ನಿರ್ಗಮಿಸುತ್ತಿರುವ ರಾಹುಲ್ ದ್ರಾವಿಡ್ ಚಾಂಪಿಯನ್‌ ಪಟ್ಟದ ಉಡುಗೊರೆ ನೀಡಿದೆ.
ವಿರಾಟ್ ಕೊಹ್ಲಿ ಪಂದ್ಯ ಪುರುಷ ಪ್ರಶಸ್ತಿಗೆ ಪಾತ್ರರಾದರೆ, ಬೂಮ್ರಾ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ, ವಿರಾಟ್‌ ಕೊಹ್ಲಿಯವರ ತಾಳ್ಮೆಯ 76 ರನ್ ಗಳ ನೆರವಿನಿಂದ 20 ಓವರ್ ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 176 ರನ್ ಗಳಿಸಿತು.
ಭಾರತದ ಪರ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಿಸಿದರು. ಮೊದಲ ಓವರ್ ನಲ್ಲೇ ಕೊಹ್ಲಿ ಮೂರು ಬೌಂಡರಿ ಬಾರಿಸುವ ಮೂಲಕ ಆಕ್ರಮಣಕಾರಿ ಆಟದ ಸುಳಿವು ಕೊಟ್ಟರು.
ಆದರೆ, ಎರಡನೇ ಓವರ್ ನಲ್ಲಿ ರೋಹಿತ್ ಶರ್ಮಾ 9 ಹಾಗೂ ವಿಕೆಟ್ ಕೀಪರ್ ರಿಷಭ್ ಪಂತ್ ಶೂನ್ಯಕ್ಕೆ ನಿರ್ಗಮಿಸಿದರು. ಇದರಿಂದಾಗಿ ತಂಡ ಒತ್ತಡಕ್ಕೆ ಸಿಲುಕಿತ್ತು. ಇದರ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್ ಕೇವಲ 3 ರನ್ ಗಳಿಸಿ ಪೆವಿಲಿಯನ್ ನತ್ತ ಮುಖಮಾಡಿದರು. ಕೇವಲ 34 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡಿತು.
ಈ ವೇಳೆ ಆಡಲಿಳಿದ ಅಕ್ಷರ್ ಪಟೇಲ್ ಕೊಹ್ಲಿ ಜೊತೆಗೂಡಿ 4ನೇ ವಿಕೆಟ್ ಗೆ ಉಪಯುಕ್ತ
72 ರನ್ ಸೇರಿಸಿದರು. ಚೆನ್ನಾಗಿ ಆಡುತ್ತಿದ್ದ ಅಕ್ಷರ್ ಪಟೇಲ್ ರನೌಟಾ‌ದರು. ನಾಲ್ಕು ಸಿಕ್ಸರ್ ಹಾಗೂ ಒಂದು ಬೌಂಡರಿ ಸಿಡಿಸುವ ಮೂಲಕ 47 ರನ್ ಗಳಿಸಿದರು.
ಒಂದೆಡೆ ವಿಕೆಟ್ ಬೀಳುತ್ತಿದ್ದರೆ ವಿರಾಟ್‌ ಕೊಹ್ಲಿ ದಕ್ಷಿಣ ಆಫ್ರಿಕಾ ಬೌಲಿಂಗ್ ದಾಳಿಗೆ ದಿಟ್ಟ ಉತ್ತರ ಕೊಟ್ಟರು. ಟೂರ್ನಿಯಲ್ಲಿ ಮೊದಲ ಬಾರಿಗೆ ಅರ್ಧ ಶತಕ ಬಾರಿಸಿದರು. ಈ ಮೂಲಕ ಟಿ-20 ಯಲ್ಲಿ 38 ನೇ ಅರ್ಧಶತಕ ಗಳಿಸಿದರು.
ಕೊಹ್ಲಿ 59 ಎಸೆತಗಳಲ್ಲಿ 76 ರನ್ ಗಳಿಸಿ ಔಟಾದರೆ, ದುಬೆ ಉಪಯುಕ್ತ 27 ರನ್ ಗಳಿಸಿದರು. ಪಾಂಡ್ಯ 5* ಹಾಗೂ ಜಡೇಜ 2 ರನ್ ಗಳಿಸಿದರು.
ದಕ್ಣಿಣ ಆಫ್ರಿಕಾ ಪರ ಮಹಾರಾಜ್ ಹಾಗೂ ನಾಕಿಯಾ ತಲಾ ಎರಡು ವಿಕೆಟ್ ಗಳಿಸಿದರೆ, ಜಾನ್ಸೆನ್ ಒಂದು ವಿಕೆಟ್ ಪಡೆದರು.