ಭಾರತ ಜತೆ ಜೆಟ್ ಇಂಜಿನ್ ಒಪ್ಪಂದಕ್ಕೆ ಯುಎಸ್ ಕಾಂಗ್ರೆಸ್ ಒಪ್ಪಿಗೆ

ವಾಷಿಂಗ್ಟನ್, ಆ.೩೧- ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ಜಾಗತಿಕ ರಾಜತಾಂತ್ರಿಕ ಸ್ಥಿತಿಯಲ್ಲಿ ಸದ್ಯ ಭಾರತ ಮತ್ತೊಂದು ಮುನ್ನಡೆ ಸಾಧಿಸಿದೆ. ಭಾರತದ ಜತೆ ಜನರಲ್ ಇಲೆಕ್ಟ್ರಿಕ್ (ಜಿಇ) ಜೆಟ್ ಎಂಜಿನ್ ಒಪ್ಪಂದವನ್ನು ಮುಂದುವರಿಸಲು ಅವಕಾಶ ನೀಡುವ ಅಧ್ಯಕ್ಷ ಜೋ ಬೈಡೆನ್ ಆಡಳಿತದ ನಿರ್ಧಾರಕ್ಕೆ ಅಮೆರಿಕದ ಸಂಸತ್ತು (ಕಾಂಗ್ರೆಸ್) ಒಪ್ಪಿಗೆ ನೀಡಿದೆ. ಇದರಿಂದ ಜೆಇ ತನ್ನ ಜೆಟ್ ಇಂಜಿನ್ ತಂತ್ರಜ್ಞಾನವನ್ನು ಭಾರತದ ಜೊತೆ ಹಂಚಿಕೊಳ್ಳಲಿದ್ದು, ಭಾರತದಲ್ಲೇ ಉತ್ಪಾದನೆಗೆ ಸಹಕಾರಿಯಾಗಿದೆ.
ಮುಂದಿನ ತಿಂಗಳು (ಸೆಪ್ಟೆಂಬರ್) ಜಿ-೨೦ ಶೃಂಗಸಭೆಯಲ್ಲಿ ಭಾಗವಹಿಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಭಾರತಕ್ಕೆ ಭೇಟಿ ನೀಡುವ ವೇಳೆ ಉಭಯ ದೇಶಗಳು ಜಿಇಯ ಎಫ್೪೧೪ ಇಂಜಿನ್‌ನ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಜೆಟ್ ಇಂಜಿನ್ ಒಪ್ಪಂದಕ್ಕೆ ಯಾವುದೇ ಆಕ್ಷೇಪ ಇಲ್ಲ ಎಂದು ಅಮೆರಿಕದ ಕಾಂಗ್ರೆಸ್ ನಿರ್ಧಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ಭಾರತದ ಹಿಂದೂಸ್ತಾನ್ ಏರೋನಾಟಿಕಲ್ಸ್ ಲಿಮಿಟೆಡ್ (ಎಚ್‌ಎಎಲ್)ಗೆ ತಂತ್ರಜ್ಞಾನ ವರ್ಗಾವಣೆ, ಭಾರತದಲ್ಲಿ ಜೆಟ್ ಎಂಜಿನ್‌ಗಳ ಉತ್ಪಾದನೆ ಮತ್ತು ಲೈಸೆನ್ಸಿಂಗ್ ಒಪ್ಪಂದ ಸೇರಿದಂತೆ ಹಲವು ಒಪ್ಪಂದಗಳನ್ನು ಮಾಡಿಕೊಳ್ಳಲು ಕಂಪನಿಗೆ ಅವಕಾಶವಾಗಲಿದೆ. ?ಶಾಸನಸಭೆಯ ಕಡೆಯಿಂದ ಈ ವಿಷಯಕ್ಕೆ ಒಪ್ಪಿಗೆ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲೇ ಮಾರಾಟಕ್ಕೆ ಅನುಮೋದನೆ ದೊರಕಿತ್ತು. ಆದರೆ ವಿಧಿವಿಧಾನಗಳ ಪ್ರಕಾರ, ರಕ್ಷಣಾ ಇಲಾಖೆಯು ಈ ಬಗ್ಗೆ ಸದನ ಹಾಗೂ ಸೆನೆಟ್ ವಿದೇಶಾಂಗ ವ್ಯವಹಾರಗಳ ಸಮಿತಿಗೆ ಜುಲೈ ೨೮ರಂದು ಈ ಬಗ್ಗೆ ಅಧಿಸೂಚನೆ ನೀಡಿದೆ. ಈ ಅಧಿಸೂಚನೆ ನೀಡಿದ ಬಳಿಕ ಅಮೆರಿಕ ಕಾಂಗ್ರೆಸ್‌ನ ಪ್ರತಿನಿಧಿಗಳು ಹಾಗೂ ಸೆನೆಟ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸದೇ ಇದ್ದರೆ ಅದನ್ನು ಒಪ್ಪಿಗೆ ಎಂದು ಪರಿಗಣಿಸಲಾಗುತ್ತದೆ” ಎಂದು ಕ್ಯಾಪಿಟಲ್ ಹಿಲ್ ಬೆಳವಣಿಗೆ ಬಗ್ಗೆ ಮಾಹಿತಿ ಇರುವ ಮೂಲಗಳು ಹೇಳಿವೆ. “ಇದುವರೆಗೆ ಯಾವುದೇ ಆಕ್ಷೇಪ ಬಂದಿಲ್ಲ. ಆದ್ದರಿಂದ ಬೈಡನ್ ಆಡಳಿತ ಮುಂದಿನ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ” ಎಂದು ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಈ ಐತಿಹಾಸಿಕ ಒಪ್ಪಂದದ ವಿಚಾರದಲ್ಲಿ ಮುಂದುವರಿಯಲು ಉಭಯ ದೇಶಗಳು ಇದೀಗ ಕ್ರಮವನ್ನು ಕೈಗೊಳ್ಳಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.