
ದೆಹಲಿ, ಮಾ.೪- ಭಾರತ ಹಾಗೂ ಚೀನಾ ಸ್ನೇಹಿತರಾಗಬೇಕೆಂದು ನಾನು ಬಯಸುತ್ತೇನೆ. ಇದರಿಂದ ಎರಡೂ ದೇಶಗಳ ನಡುವಿನ ಮನಸ್ತಾಪ ಕಡಿಮೆಯಾಗಬಹುದು ಎಂದು ರಷ್ಯಾದ ವಿದೇಶಾಂಗ ಸಚಿವ ಸರ್ಜಿಯೊ ಲ್ಯಾವ್ರೋವ್ ತಿಳಿಸಿದ್ದಾರೆ. ಅವರು ದೆಹಲಿಯಲ್ಲಿ ನಡೆದ ರೈಸಿನಾ ಡೈಲಾಗ್‌ನಲ್ಲಿ ಮಾತನಾಡುತ್ತಿದ್ದರು.
ಭಾರತ ಹಾಗೂ ಚೀನಾ ಎರಡೂ ದೇಶಗಳ ಜೊತೆ ರಷ್ಯಾ ಅತ್ಯುತ್ತಮ ಸಂಬಂಧವನ್ನು ಹೊಂದಿದೆ. ರಷ್ಯಾದ ಮಾಜಿ ವಿದೇಶಾಂಗ ಸಚಿವರಾಗಿದ್ದ ಯಾವ್ಗೆನಿ ಪ್ರಿಮಕೊವ್ ಅವರು ರಷ್ಯಾ-ಚೀನಾ-ಭಾರತ (ಆರ್‌ಐಸಿ) ಗುಂಪನ್ನು ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಎರಡು ಮಹಾನ್ ದೇಶಗಳು ಗೆಳೆಯರಾಗಬೇಕೆಂದು ನಾವು ಬಯಸುತ್ತೇವೆ. ಈ ವಿಚಾರದಲ್ಲಿ ರಷ್ಯಾ ಸಹಾಯ ಮಾಡಲು ಬಯಸುತ್ತದೆ. ಆರ್‌ಐಸಿಯಲ್ಲಿ ರಷ್ಯಾದ ಉಪಸ್ಥಿತಿಯು ಭಾರತ ಹಾಗೂ ಚೀನಾಗೆ ಪ್ರಯೋಜನವಾಗಬಹುದು. ರಷ್ಯಾ ಎಂದಿಗೂ ಜನರನ್ನು ಒಂದುಗೂಡಿಸಲು ಬಯಸುತ್ತದೆ. ಬ್ರಿಕ್ಸ್‌ನಷ್ಟು ಆರ್‌ಐಸಿ ಜನಪ್ರಿಯವಾಗದಿದ್ದರೂ, ಅದು ಕಾರ್ಯನಿರ್ವಹಿಸುವುದನ್ನು ಮುಂದುವರೆಸಿದೆ. ಅದರಂತೆ ಆರ್‌ಐಸಿ ಸಚಿವರ ಸಭೆಯು ಇದೇ ವರ್ಷ ನಡೆಯಲಿದೆ. ರಷ್ಯಾ-ಭಾರತದ ನಡುವಿನ ಸಂಬಂಧವು ಮೋದಿ ಹಾಗೂ ಪುಟಿನ್ ಸಹಿ ಮಾಡಿರುವ ಅಧಿಕೃತ ದಾಖಲೆಗಳಲ್ಲಿ ವಿಶೇಷವಾಗಿ ಸವಲತ್ತು ಪಡೆದ ಕಾರ್ಯತಂತ್ರದ ಪಾಲುದಾರಿಕೆ ಎಂದು ನಿರೂಪಿಸಲಾಗಿದೆ. ಆದರೆ ಇತರೆ ಯಾವುದೇ ದೇಶವು ಅಧಿಕೃತವಾಗಿ ಕಾಗದದ ಮೇಲೆ ಅದೇ ಸ್ಥಾನಮಾನವನ್ನು ಹೊಂದಿದೆಯೇ ಎಂದು ನನಗೆ ತಿಳಿದಿಲ್ಲ ಎಂದು ತಿಳಿಸಿದ ಲ್ಯಾವ್ರೋವ್ ಸದ್ಯ ನಡೆಯುತ್ತಿರುವ ಉಕ್ರೇನ್-ರಷ್ಯಾ ಕದನದ ಬಗ್ಗೆ ಕೂಡ ಪ್ರತಿಕ್ರಿಯೆ ನೀಡಿದರು. ರಷ್ಯಾ ಯಾವಾಗ ಮಾತುಕತೆಗೆ ಸಿದ್ಧವಾಗಲಿದೆ ಎಂದು ಎಲ್ಲರೂ ಕೇಳುತ್ತಾರೆ. ಆದರೆ ಉಕ್ರೇನ್ ಬಳಿ ಮಾತ್ರ ಯಾರೂ ಈ ಪ್ರಶ್ನೆಯನ್ನು ಕೇಳುತ್ತಿಲ್ಲ. ಪುಟಿನ್ ಅಧ್ಯಕ್ಷರಾಗಿ ಇರುವರೆಗೂ ರಷ್ಯಾದ ಜೊತೆ ಮಾತುಕತೆ ನಡೆಸುವುದು ಕ್ರಿಮಿನಲ್ ಅಪರಾಧ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ದಾಖಲೆಯೊಂದಕ್ಕೆ ಸಹಿ ಹಾಕಿದ್ದರು. ಝೆಲೆನ್ಸ್ಕಿ ಏನು ಮಾಡುತ್ತಿದ್ದಾನೆ ಎಂದು ನೀವು ಕೇಳುತ್ತೀರಾ ಎಂದು ಲ್ಯಾವ್ರೋವ್ ಪ್ರಶ್ನಿಸಿದ್ದಾರೆ.