ಭಾರತ-ಚೀನಾ ನಡುವೆ ೧೯ನೇ ಸುತ್ತಿನ ಮಾತುಕತೆ

ನವದೆಹಲಿ,ಆ.೧೨- ಭಾರತ ಮತ್ತು ಚೀನಾ ನಡುವೆ ಸಂಘರ್ಷ ನಡೆಯುತ್ತಿರುವಾಗಲೇ ಉಭಯ ದೇಶಗಳ ನಡುವೆ ೧೯ನೇ ಸುತ್ತಿನ ಸೇನಾ ಮಾತುಕತೆ ಮುಂದಿನ ವಾರ ನಡೆಯಲಿದೆ.

ಮಿಲಿಟರಿ ಮಾತುಕತೆ ಸಮಯದಲ್ಲಿ ಡೆಪ್ಸಾಂಗ್ ಮತ್ತು ಡೆಮ್‌ಚೋಕ್‌ನಲ್ಲಿ ಸೇನೆ ಹಿಂಪಡೆಯುವಂತೆ ಚೀನಾವನ್ನು ಒತ್ತಾಯಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

೧೯ ನೇ ಸುತ್ತಿನ ಕಾಪ್ರ್ಸ್ ಕಮಾಂಡರ್-ಮಟ್ಟದ ಮಾತುಕತೆ ಆಗಸ್ಟ್ ೧೪ ರಂದು ಚುಶುಲ್-ಮೊಲ್ಡೊ ಗಡಿ ಸಭೆಯ ಸ್ಥಳದ ಭಾರತದ ಭಾಗದಲ್ಲಿ ನಡೆಯಲಿದೆ, ಕೊನೆಯ ಸುತ್ತು ಮಾತುಕತೆ ವಿಫಲವಾದ ಸುಮಾರು ನಾಲ್ಕು ತಿಂಗಳ ನಂತರ, ರಕ್ಷಣಾ ಮೂಲಗಳು ತಿಳಿಸಿವೆ.

ಭಾರತೀಯ ನಿಯೋಗವನ್ನು ೧೪ ಕಾಪ್ರ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ರಶೀಮ್ ಬಾಲಿ ನೇತೃತ್ವ ವಹಿಸಲಿದ್ದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಐಟಿಬಿಪಿ ಅಧಿಕಾರಿಗಳನ್ನು ಒಳಗೊಂಡಿರುತ್ತದೆ, ಆದರೆ ಚೀನಾದ ತಂಡ ದಕ್ಷಿಣ ಕ್ಸಿನ್‌ಜಿಯಾಂಗ್ ಮಿಲಿಟರಿ ಜಿಲ್ಲಾ ಮುಖ್ಯಸ್ಥರ ನೇತೃತ್ವದಲ್ಲಿ ನಡೆಯಲಿದೆ ಎಂದು ತಿಳಿಸಿದೆ.

ಪೂರ್ವ ಲಡಾಕ್‌ನಿಂದ ಅರುಣಾಚಲ ಪ್ರದೇಶದವರೆಗೆ ಚಾಚಿರುವ ೩,೪೮೮-ಕಿಮೀ ಉದ್ದದ ನೈಜ ನಿಯಂತ್ರಣ ರೇಖೆಯ ಉದ್ದಕ್ಕೂ ನಡೆಯುತ್ತಿರುವ ಚೀನಾದ ಮಿಲಿಟರಿ ಚಟುವಟಿಕೆ ಹೆಚ್ಚಿಸುತ್ತಿರುವ ಸಮಯದಲ್ಲಿ ಮಾತುಕತೆಗೆ ವೇದಿಕೆ ಸಜ್ಜಾಗಿದೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗಿನ ಮಾತಕತೆಯ ಸಮಯದಲ್ಲಿ ೨೦೨೦ರ ಏಪ್ರಿಲ್-ಮೇ ರಿಂದ ಚೀನಾ ಭಾರತದ ನಂಬಿಕೆ ಕಳೆದುಕೊಂಡಿದೆ ಎಂದು ಆರೋಪಿಸಿದ್ದರು.

ಸೇನಾ ಮಾತುಕತೆಯಲ್ಲಿ, ಕಾಪ್ರ್ಸ್ ಕಮಾಂಡರ್‍ಗಳ ನಡುವೆ “ಪ್ರಸ್ತಾವನೆಗಳು ಮತ್ತು ಪ್ರತಿ-ಪ್ರಸ್ತಾವನೆಗಳು” ವಿನಿಮಯವಾದಾಗ, ಡೆಪ್ಸಾಂಗ್ ಬಯಲು ಪ್ರದೇಶದಲ್ಲಿ ಮತ್ತು ಡೆಮ್‌ಚೋಕ್‌ನಲ್ಲಿರುವ ಚಾರ್ಡಿಂಗ್ ನಿಂಗ್‌ಲುಂಗ್ ನಲ್ಲ ಟ್ರ್ಯಾಕ್ ಜಂಕ್ಷನ್‌ನಲ್ಲಿ ಸೈನಿಕರನ್ನು ಹೊರಹಾಕುವ ಭಾರತದ ಬೇಡಿಕೆಯನ್ನು ಚೀನಾ ತಿರಸ್ಕರಿಸಿದೆ.